ಕಾರವಾರ: ತಾಲೂಕಿನ ಪೋಸ್ಟ ಚೆಂಡಿಯಾ ಬಳಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಮಲಗಿದ್ದ ಎಮ್ಮೆಗಳಿಗೆ ಬುಧವಾರ ಬೆಳಗಿನ ಜಾವ ಕಾರು ಡಿಕ್ಕಿಯಾಗಿ ಎರಡು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರು ಜಖಂಗೊಂಡಿದೆ.
ಕಾರವಾರದಿಂದ ಅಂಕೋಲಾದತ್ತ ಕಾರು ತೆರಳುತ್ತಿತ್ತು. ರಸ್ತೆಯ ಮೇಲೆ ಮಲಗಿದ್ದ ಎಮ್ಮೆಗಳು ಚಾಲಕನ ಗಮನಕ್ಕೆ ಬಾರದೇ ಅಪಘಾತವಾಗಿದ್ದು, ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ಜಾನುವಾರುಗಳು ಮಲಗುತ್ತವೆ. ಹೆದ್ದಾರಿಯ ಬಹುತೇಕ ಕಡೆ ಬೀದಿದೀಪ ಇಲ್ಲದ ಕಾರಣ ಕತ್ತಲಲ್ಲಿ ಜಾನುವಾರುಗಳು ಕಾಣದೇ ಹಲವು ಅಪಘಾತ ನಡೆದಿದೆ. ಬಿಡಾಡಿ ದನಗಳನ್ನು ನಿಯಂತ್ರಿಸುವುದರ ಜತೆಗೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬೀದಿದೀಪ ಅಳವಡಿಸಲು ಕ್ರಮವಹಿಸುವ ಅಗತ್ಯವಿದೆ.ಕಾಲುಜಾರಿ ನದಿಗೆ ಬಿದ್ದು ಮೀನುಗಾರ ಸಾವು
ಭಟ್ಕಳ: ತಾಲೂಕಿನ ಬೆಳಕೆಯ ನದಿಯಲ್ಲಿ ಬುಧವಾರ ಮೀನಿಗೆ ಬಲೆ ಬೀಸುವ ಸಂದರ್ಭದಲ್ಲಿ ಮೀನುಗಾರನೋರ್ವ ಆಕಸ್ಮಿಕ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.ಬೆಳಕೆ ಮೊಗೇರಕೇರಿ ನಿವಾಸಿ ಮಂಜುನಾಥ ವೆಂಕ್ಟ ಮೊಗೇರ(62) ಮೃತ ಮೀನುಗಾರ. ಬುಧವಾರ ಮಧ್ಯಾಹ್ನ ಮೀನಿಗೆ ಬಲೆ ಬೀಸುವಾಗ ಬಲೆಯು ಕುತ್ತಿಗೆ ಸಿಕ್ಕಿ ಆಕಸ್ಮಿಕವಾಗಿ ಹೊಳೆಗೆ ಜಾರಿ ಬಿದ್ದು ಮೃತಪಟ್ಟಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಾಲೆಗೆ ಹೋಗಬೇಕೆಂಬ ಕಾರಣಕ್ಕೆ ಬಾಲಕ ಆತ್ಮಹತ್ಯೆ?
ಜೋಯಿಡಾ: 11 ವರ್ಷದ ಬಾಲಕನೊಬ್ಬ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ರಾಮನಗರದ ಹನುಮಾನಗಲ್ಲಿಯಲ್ಲಿ ನಡೆದಿದ್ದು, ಶಾಲೆಗೆ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಜ್ಞಾನೇಶ್ವರ ಮಿರಾಶಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಲೋಂಡಾದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ. ಈ ವರ್ಷ ಐದನೇ ತರಗತಿಗೆ ಹೋಗಬೇಕಿತ್ತು. ಆದರೆ ಆತನಿಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಈ ಹಿಂದೆ ಹಲವು ಬಾರಿ ಶಾಲೆಗೆ ಹೋಗುವುದನ್ನು ತಪ್ಪಿಸುತ್ತಿದ್ದ. ಶಾಲೆಗೆ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ತಾಯಿ ಕೆಲಸದ ನಿಮಿತ್ತ ಗೋವಾದಲ್ಲಿದ್ದರು. ಆತನ ಸಹೋದರಿ, ತಂದೆ ಈತನ ಜೊತೆ ಮನೆಯಲ್ಲಿ ವಾಸಿಸುತ್ತಿದ್ದರು. ಬುಧವಾರ ಬೆಳಗ್ಗೆ ಸಹೋದರಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ, ತಂದೆ ಮತ್ತು ಮಗ ಮನೆಯಲ್ಲಿದ್ದರು. ಮಲಗಿದ್ದ ತಂದೆ ಎಚ್ಚರಗೊಂಡು ಮಗನಿಗೆ ಊಟ ಬಡಿಸಲು ಊಟದ ಕೋಣೆಗೆ ಹೋದಾಗ ಮಗ ಸೀರೆ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಮಟಕಾ ದಂಧೆ ನಡೆಸುತ್ತಿದ್ದ ವ್ಯಕ್ತಿ ಬಂಧನ
ಶಿರಸಿ: ಇಲ್ಲಿನ ಗಣೇಶನಗರದ ಪುಟ್ಟನಮನೆ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಹಾಲಿ ಗಣೇಶನಗರ ಬೇನಕಾ ಕಾಲನಿಯ ನಿವಾಸಿ ಪರಶುರಾಮ ಸಣ್ಣಬಸಪ್ಪ ಬಾರ್ಕಿ(೩೦) ಮೇಲೆ ಪ್ರಕರಣ ದಾಖಲಾಗಿದೆ. ಈತ ತನ್ನ ಲಾಭಕ್ಕೊಸ್ಕರ ಗಣೇಶನಗರದ ಪುಟ್ಟನಮನೆ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ದಂಧೆ ನಡೆಸುತ್ತಿದ್ದ. ನಗರ ಠಾಣೆ ಪಿಎಸ್‌ಐ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, ₹೧೩೫೦ ನಗದು, ಅಂಕಿಗಳ ಸಂಖ್ಯೆ ಬರೆದ ಚೀಟಿ, ಬಾಲ್ ಪೆನ್‌ಗಳನ್ನು ವಶಕ್ಕೆ ಪಡೆದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.