ಕನ್ನಡಪ್ರಭ ವಾರ್ತೆ ಮೈಸೂರು
ಅ.4 ರಂದು ಮಕ್ಕಳ ದಸರಾ ವೈಭವದ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ದೇವರಾಜ ಅರಸು ರಸ್ತೆ ಮೂಲಕ ಮಹಾರಾಜ ಸರ್ಕಾರಿ ಪ್ರೌಢಶಾಲೆ ಜೆ.ಎಲ್.ಬಿ ರಸ್ತೆಯ ವರೆಗೆ ಮಕ್ಕಳ ದಸರಾ ಕಲಾಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸುಮಾರು 1 ಸಾವಿರ ಪ್ರೌಢಶಾಲಾ ಮಕ್ಕಳು ಮೆರವಣಿಗೆ ತೆರಳುವ ಮೂಲಕ ಹಾಡಿ/ ಕಾಡು ಮಕ್ಕಳ ಕುಣಿತ, ಜಾನಪದ ನೃತ್ಯ, ಸಾಂಸ್ಕೃತಿಕ ನೃತ್ಯ, ಗಾರುಡಿ ಗೊಂಬೆ, ಹುಲಿವೇಷ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ, ಬ್ಯಾಂಡ್ಸೆಟ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ ಹಾಗೂ ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳು, ಸ್ವತಂತ್ರ ಹೋರಾಟಗಾರರು ಮತ್ತು ಪರಿಸರ ಸಂರಕ್ಷಣೆಯಂತಹ ವಿಷಯಗಳನ್ನೊಳಗೊಂಡ ವಿವಿಧ ವೇಷಭೂಷಣ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.ಅ.5ರ ಬೆಳಗ್ಗೆ 10ಕ್ಕೆ ಮಹಾರಾಣಿ ಕಾಲೇಜಿನ ಟಿಟಿಐನಲ್ಲಿ ದೇಸಿ ಆಟಗಳ ಸ್ಪರ್ಧೆಗಳ ಆಯೋಜಿಸಲಾಗಿದೆ. ಅ.6 ಮತ್ತು 7 ರಂದು ಕಲಾಮಂದಿರದಲ್ಲಿ ಮಕ್ಕಳ ದಸರಾ- ಮಕ್ಕಳಿಂದ ಮಕ್ಕಳಿಗಾಗಿಯೇ ನಡೆಯು ದಸರಾ ದರ್ಬಾರ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಅ.6 ರಂದು ಕಾರ್ಯಕ್ರಮದ ಉದ್ಘಾಟನೆಯ ನಂತರ ಸರ್ಕಾರಿ ಶಾಲಾ ಮಕ್ಕಳಿಂದ ಗೀತಸೌರಭ, ವಿಶೇಷ ಸಾಧನೆ ಮಾಡಿದ ಪ್ರತಿಭಾವಂತ ಮಕ್ಕಳ ಕಾರ್ಯಕ್ರಮ, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ವೈಭವ, ಸೈಬರ್ ಸುರಕ್ಷತೆ, ವಿಜ್ಞಾನ ನಾಟಕ, ಚಿತ್ರಕಲಾ ಸ್ಪರ್ಧೆ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಭಾಗವಹಿಸುವ ಮಕ್ಕಳಿಗೆ ಬೆಳಗಿನ ಮತ್ತು ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳ ದಸರಾ ನಡೆಯುವ ಎರಡೂ ದಿನಗಳಲ್ಲೂ ಕಲಾಮಂದಿರದ ಆವರಣದಲ್ಲಿ ಎಲ್ಲಾ ಬ್ಲಾಕ್ ಗಳಿಂದ ವಿವಿಧ ಥೀಮ್ ಗಳಡಿಯಲ್ಲಿ 15 ಮಳಿಗೆಗಳ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ.