ಕನ್ನಡಪ್ರಭ ವಾರ್ತೆ ಮೈಸೂರು
ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗವು ಭತ್ತ ಉಳಿಸಿ ಆಂದೋಲನದ ಜೊತೆಗೂಡಿ ದೇಶಿ ಅಕ್ಕಿ ಮೇಳವನ್ನು ಆ.9 ಮತ್ತು 10 ರಂದು ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದೆ.ಹಳೆ ಮೈಸೂರು ಭತ್ತದ ವೈವಿಧ್ಯಕ್ಕೆ ಹೆಸರುವಾಸಿಯಾಗಿತ್ತು. ರಾಜಮುಡಿ, ರತ್ನಚೂಡಿ, ರಾಜಭೋಗ, ಪುಟ್ಟ ಭತ್ತ, ಆನೆ ಕೊಂಬಿನ ಭತ್ತ, ಬಂಗಾರ ಕಡ್ಡಿ, ಮುಂಡುಗ, ಹಾಲುಬ್ಬಲು ಮೊದಲಾದ ತಳಿಗಳನ್ನು ಇಲ್ಲಿನ ರೈತರು ಬೆಳೆಸುತ್ತಿದ್ದರು. ಅನ್ನಕ್ಕೊಂದು,ಅವಲಕ್ಕಿಗೊಂದು, ಕಜ್ಜಾಯಕ್ಕೆ ಇನ್ನೊಂದು, ಬಿರಿಯಾನಿ ಮಾಡಲು ಮಗದೊಂದು ಅಕ್ಕಿ ಬಳಕೆಯಾಗುತ್ತಿತ್ತು. ಹತ್ತಾರು ಕಾಯಿಲೆಗಳಿಗೆ ದೇಶಿ ಅಕ್ಕಿಯ ಅನ್ನವೇ ಔಷಧಿಯಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಕೈಯಿಂದ ಜಾರುವಷ್ಟು ನುಣುಪಾದ, ಪಾಲಿಷ್ ಮಾಡಿದ ಬಿಳಿ ಬಣ್ಣದ ಅಕ್ಕಿಯೇ ಶ್ರೇಷ್ಠ ಎಂದು ನಂಬಿದ ಗ್ರಾಹಕರು, ತಮಗೆ ಅರಿವಿಲ್ಲದೆಯೇ ರೋಗಗಳ ದಾಸರಾಗುತ್ತಿದ್ದೇವೆ. ದೇಶಿಯ ಅಕ್ಕಿಗಳ ವೈವಿಧ್ಯದ ಬಗ್ಗೆ ಗ್ರಾಹಕರು ಮತ್ತು ರೈತರಿಗೆ ಅರಿವು ಮೂಡಿಸುವ ಉದ್ದೇಶದಿಂದ ದೇಶಿ ಅಕ್ಕಿ ಮೇಳವನ್ನು ಏರ್ಪಡಿಸಲಾಗಿದೆ.ದೇಶಿ ಅಕ್ಕಿ ಮೇಳದಲ್ಲಿ ಕೆಂಪು, ಕಪ್ಪು, ಕೆನೆ ಬಣ್ಣದ, ಪರಿಮಳದ ಬಗೆ ಬಗೆಯ ಅಕ್ಕಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರುತ್ತಿವೆ. ಔಷಧೀಯ ಭತ್ತ ಮತ್ತು ಅಕ್ಕಿಗಳ ಮಾರಾಟ ಈ ವರ್ಷದ ವಿಶೇಷ. ಉತ್ತರಪ್ರದೇಶದ ಕಲಾ ನಮಕ್, ಒರಿಸ್ಸಾದ ಕಾಲಾ ಜೀರಾ, ಅಸ್ಸಾಂನ ಕೋಮಲ್ ಚಾವಲ್, ಕೇರಳದ ನವರ, ಮುಳ್ಳನ್ ಕಯಮ, ತಮಿಳುನಾಡಿನ ಮಾಪಿಳ್ಳೆ ಸಾಂಬ, ಮಹಾರಾಷ್ಟ್ರದ ಅಂಬೆ ಮೊಹರ್, ಆಂಧ್ರದ ಚಿಟ್ಟ ಮುತ್ಯಾಲು, ಪಶ್ಚಿಮ ಬಂಗಾಳದ ಗೋವಿಂದ ಭೋಗ್ ಮತ್ತು ಕಾಲಾ ಬಾತ್ ಅಕ್ಕಿ ಮೊದಲಾದ ಹೆಸರಾಂತ ತಳಿಯ ಭತ್ತ ಮತ್ತು ಅಕ್ಕಿ ಮಾರಾಟಕ್ಕೆ ಬರಲಿವೆ.
ಕರ್ನಾಟಕದ ಕರಿಗಜಿವಿಲಿ, ರಾಜಮುಡಿ, ದೊಡ್ಯಗ, ದೊಡ್ಡ ಬೈರ ನೆಲ್ಲು, ಸಿದ್ಧ ಸಣ್ಣ, ಸೇಲಂ ಸಣ್ಣ, ರಾಜ ಭೋಗ, ಅಂದನೂರು ಸಣ್ಣ, ಉದುರು ಸಾಲಿ, ಗಿಣಿ ಸಾಲಿ ಮೊದಲಾದ ಅಕ್ಕಿ ಮಾರಾಟಕ್ಕೆ ಸಿಗಲಿವೆ. 200 ಹೆಚ್ಚಿನ ದೇಶಿ ಭತ್ತದ ತಳಿಗಳ ಪ್ರದರ್ಶನವಿರುತ್ತದೆ. ಮುಂಗಾರಿಗೆ ಬಿತ್ತಲು ಗುಣಮಟ್ಟದ ಬಿತ್ತನೆ ಭತ್ತ ಸಿಗಲಿದೆ. ಸಾವಯವ ಪದಾರ್ಥಗಳು, ಹಣ್ಣು ಹಂಪಲು, ನಾಟಿ ಬೀಜ ಮತ್ತು ಮೌಲ್ಯವರ್ಧಿತ ಪದಾರ್ಥಗಳು ಸಿಗಲಿವೆ.ದೇಶಿ ಅಕ್ಕಿ ಅಡುಗೆ ಸ್ಪರ್ಧೆ:
ಅನ್ನ ಸಂಸ್ಕೃತಿಯ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಅಕ್ಕಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು, ದೇಶಿ ಅಕ್ಕಿಯಿಂದ ಮಾಡಿದ ಯಾವುದೇ ಅಡುಗೆಯನ್ನು ಮನೆಯಲ್ಲಿ ಮಾಡಿ, ಆ.10ರ ಮಧ್ಯಾಹ್ನ 12.30ಕ್ಕೆ ಮೇಳಕ್ಕೆ ತರಬೇಕು. ಆಯ್ದ ಮೂರು ಉತ್ತಮ ಅಡುಗೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ.5 ರಿಂದ 10 ವರ್ಷದ ಮತ್ತು 10 ರಿಂದ 15 ವರ್ಷದ ಒಳಗಿನ ಮಕ್ಕಳಿಗಾಗಿ ನಾ ಕಂಡ ಭತ್ತದ ಲೋಕ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಮನೆಯಲ್ಲೇ ಚಿತ್ರ ಬಿಡಿಸಿ, ಆ.10ರ ಬೆಳಗ್ಗೆ 11ಕ್ಕೆ ಮೇಳಕ್ಕೆ ತರಬೇಕು. ಆಯ್ಕೆಯಾದ ಆರು ಚಿತ್ರಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ ಎಂದು ಸಹಜ ಸಮೃದ್ಧ ನಿರ್ದೇಶಕ ಜಿ. ಕೃಷ್ಣಪ್ರಸಾದ್ ತಿಳಿಸಿದ್ದಾರೆ.