ಕನ್ನಡಪ್ರಭ ವಾರ್ತೆ ಮಳವಳ್ಳಿ
ಗಗನಚುಕ್ಕಿ ಬಳಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಜಲಪಾತೋತ್ಸವ ಅದ್ಧೂರಿಯಾಗಿ ತೆರೆ ಕಂಡಿತು.ವಿಶ್ವ ವಿಖ್ಯಾತ ಜಲಪಾತೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ನಿರೀಕ್ಷೆಗೂ ಮೀರಿ ಬಂದಿದ್ದ ಸಾವಿರಾರು ಪ್ರವಾಸಿಗರು ಪರಿಸರ ಹಾಗೂ ಸಾಂಸ್ಕೃತಿಕ ರಸದೌತಣವನ್ನು ಸವಿದರು.
ಭಾನುವಾರ ರಜೆ ಹಿನ್ನೆಲೆ ಬೆಂಗಳೂರು, ಮೈಸೂರು, ಚಾಮರಾಜನಗರ, ರಾಮನಗರ ಸೇರಿ ಹಲವು ಜಿಲ್ಲೆಗಳಿಂದ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ತಂಡೋಪ ತಂಡವಾಗಿ ಪ್ರವಾಸಿಗರು ಆಗಮಿಸಿದ್ದರು.ಗಗನದಿಂದ ಹಾಲ್ನೋರೆಯಂತೆ ಧುಮ್ಮಿಕ್ಕಿ ಹರಿಯುವ ಜಲಸಿರಿ ಹಾಗೂ ವಿವಿಧ ಬಣ್ಣದ ಚಿತ್ತಾರದ ನಡುವೆ ನಡೆದ ಲೇಸರ್ ಶೋ ಪ್ರವಾಸಿಗರನ್ನು ಮನಸೂರೆಗೊಳ್ಳುವಂತೆ ಮಾಡಿತು. ಪ್ರವಾಸಿಗರು ಪೋಟೋ ಕ್ಲಿಕ್ಕಿಸಿಗೊಳ್ಳುತ್ತಿರುವುದು ಕಂಡು ಬಂದಿತು.
ಭಾನುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಿ ಗಮನ ಸೆಳೆದರು. ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಅವರ ಅನೇಕ ಗಾಯನಗಳು ಜನರ ಮನ ಸೆಳೆಯಿತು.ನಂತರ ಜಾನಪದ ಕಲಾವಿದರಾದ ಸವಿತಕ್ಕ, ಹರ್ಷ, ಕಂಬದ ರಂಗಯ್ಯ ಹಾಗೂ ಮಲ್ಲಿಕಾರ್ಜುನ ಕೆಂಕೆರೆ ಕಾರ್ಯಕ್ರಮ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ರಸದೌತಣಕ್ಕೆ ಪ್ರವಾಸಿಗರು ಕುಣಿದು ಕುಪ್ಪಳಿಸಿದರು.
ತಾಲೂಕಿನ ಬಹುತೇಕ ಗ್ರಾಮಗಳ ಜನರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಉಚಿತ ಸಾರಿಗೆ ವ್ಯವಸ್ಥೆ ಮಾಡಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ತಾಲೂಕಿನ ಹಲಗೂರು, ಕಿರುಗಾವಲು, ಬಿ.ಜಿ.ಪುರ, ಮಳವಳ್ಳಿ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಗೆ ನೂರಾರು ಬಸ್ ಗಳ ಮೂಲಕ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ನೂರಾರು ಪೊಲೀಸರು ಭದ್ರತೆ ಕಲ್ಪಿಸಿದರು.ಎರಡು ದಿನಗಳ ಅಚ್ಚುಕಟ್ಟಾದ ಊಟದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತವಾಯಿತು.
ನಂತರ ರಾತ್ರಿ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ಕಾಮಿಡಿ ಶೋ, ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡದಿಂದ ಸಂಗೀತ, ನೃತ್ಯ ಪ್ರದರ್ಶನ ಹಾಗೂ ಹರ್ಷಿಕಾ ಪೂಣಚ್ಚ ಮತ್ತು ಭಾವನಾ ರಾವ್ ರವರಿಂದ ಕಾರ್ಯಕ್ರಮಗಳು ಪ್ರವಾಸಿಗರನ್ನು ರಂಜಿಸಿದವು.