ಕಾರ್ಕಳ: ಅಗ್ನಿ ಅವಘಡ ಸಂಭವಿಸಿ ಎರಡು ಕಂಬಳದ ಕೋಣಗಳು ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿ ಬಾವ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಅಶೋಕ್ ಶೆಟ್ಟಿ ಅವರ ಕನಹಲಗೆ ವಿಭಾಗದಲ್ಲಿ ಗುರುತಿಸಿಕೊಂಡಿದ್ದ ಥೋನ್ಸೆ ಮತ್ತು ಅಪ್ಪು ಮೃತಪಟ್ಟ ಕೋಣಗಳು. ಶುಕ್ರವಾರ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಅದರಿಂದ ಹಟ್ಟಿಗೆ ತಾಗಿಕೊಂಡಿದ್ದ ಭತ್ತದ ಬಣವೆಗೂ ಬೆಂಕಿ ಹರಡಿತು. ಈ ವೇಳೆ ಉಂಟಾದ ಬೆಂಕಿಯ ಕೆನ್ನಾಲಿಗೆಯು ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಕಂಬಳದ ಕೋಣಗಳನ್ನು ಆಹುತಿ ತೆಗೆದುಕೊಂಡಿದೆ.
ಥೋನ್ಸೆ ಮತ್ತು ಅಪ್ಪು ಕೋಣಗಳು 2022-23ರ ಕನೆಹಲಗೆ ವಿಭಾಗದ ಕಂಬಳ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದ್ದವು. ಥೋನ್ಸೆ ನಂತರದ 2023–24ರ ಋತುವಿನಲ್ಲಿ ನಿವೃತ್ತಿ ಹೊಂದಿತ್ತು. ಈ ಕೋಣವನ್ನು ಅಲೆವೂರಿನಿಂದ ತರಲಾಗಿತ್ತು.
ಅಪ್ಪು ಕೋಣ ಅಡ್ಡಹಲಗೆ, ಕನೆಗಲಗೆ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿತ್ತು. ಕೊಣಚೂರು, ಕೊಂಡೊಟ್ಟು, ಚೆನ್ನನೊಟ್ಟಿಗೆ ಹಗ್ಗ ಹಿರಿಯ ವಿಭಾಗಗಳಲ್ಲಿ ಈ ಕೋಣ ಗಮನ ಸೆಳೆಯುತ್ತಾ ಬಂದಿತ್ತು.