ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆ ತುಂಬು ಗರ್ಭಿಣಿ ಆಗಿದ್ದಾಗ ಅದರ ಬಾಲಕ್ಕೆ ಮಚ್ಚಿನಿಂದ ಹೊಡೆದಂತೆ ರಕ್ತಗಾಯವಾಗಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯ ಮುತುವರ್ಜಿ ವಹಿಸಿದ್ದ ಕಾವಾಡಿಗಳಾದ ಸುದೀಪ್ ಹಾಗೂ ಮಹಮ್ಮದ್ ಎಂಬವರನ್ನು ಅಮಾನತು ಮಾಡಿದ್ದಾರೆ.ಭಾನುಮತಿ ಆನೆ ಮೇಯಲು ಕಾಡಿಗೆ ಹೋಗಿದ್ದಾಗ ಘಟನೆ ನಡೆದಿದ್ದು, ಈ ಬಗ್ಗೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ, ಆನೆ ಬಾಲ ಘಾಸಿಗೊಳಿಸಿದ್ದು ಯಾರು, ಯಾಕೆ ತುಂಡರಿಸುವ ಪ್ರಯತ್ನ ಮಾಡಿದ್ದರು ಎಂಬುದಕ್ಕೆ ಈವರೆಗೂ ನಿಖರ ಉತ್ತರ ಸಿಕ್ಕಿಲ್ಲ.
ಭಾನುಮತಿ ಆನೆ ಮೇಯಲು ಕಾಡಿಗೆ ಹೋದಾಗ ಮಚ್ಚಿನಿಂದ ಹೊಡೆದಂತಾಗಿ ಅದರ ಅರ್ಧ ಬಾಲ ಜೋತಾಡುತ್ತಿತ್ತು. ಬಿಡಾರದ ವೈದ್ಯ ಡಾ.ವಿನಯ್ ಶಸ್ತ್ರಚಿಕಿತ್ಸೆ ನೀಡಿದ ಬಳಿಕ ಆನೆ ಚೇತರಿಕೆ ಕಂಡಿತ್ತು. ಒಂದು ಆಯಾಮದಲ್ಲಿ ಅರಣ್ಯ ಇಲಾಖೆ ಒಳಗೆ ಇರುವವರ ಪರಸ್ಪರ ದ್ವೇಷಕ್ಕೆ ಯಾರಾದರೂ ಆನೆಗೆ ಹೀಗೆ ಗಾಯ ಮಾಡಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿತ್ತು. ಇನ್ನೊಂದು ಆಯಾಮದಲ್ಲಿ ಆನೆ ಬಾಲಕ್ಕೆ ಬಲವಾದ ಬಿದಿರು ತಾಗಿಯೂ ಗಾಯ ಆಗಿರಬಹುದು ಎಂಬ ಉತ್ತರಗಳು ಕೇಳಿಬಂದಿದ್ದವು.ಈ ಘಟನೆಗೆ ಕಾವಾಡಿಗಳಾದ ಸುದೀಪ್ ಹಾಗೂ ಮಹಮ್ಮದ್ ಅವರ ಕರ್ತವ್ಯ ನಿರ್ಲಕ್ಷ್ಯಕಾರಣ. ಈ ಹಿನ್ನೆಲೆ ಇವರಿಬ್ಬರನ್ನು ಅಮಾನತು ಮಾಡಲಾಗಿದೆ. ಭಾನುಮತಿ ಆನೆ ಈಗಾಗಲೇ ಹೆಣ್ಣುಮರಿಗೆ ಜನ್ಮ ನೀಡಿದೆ.
- - -