ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಾರೊಂದು ಎದುರು ಬರುತ್ತಿದ್ದ ಟೆಂಪೋ ಟ್ರಾವೆಲ್ಲರ್ (ಟಿಟಿ) ಗೆ ಮುಖಾಮುಖಿ ಡಿಕ್ಕಿ ಹೊಡೆದು ಕಾರಲ್ಲಿದ್ದ ಇಬ್ಬರು ಸಾವನ್ನಪ್ಪಿ, ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಟಿಟಿ ಚಾಲಕನ ಕಾಲು ತುಂಡಾಗಿದ್ದು, ೧೦ ಮಂದಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ತಾಲೂಕಿನ ಬೆಂಡಗಳ್ಳಿ ಗೇಟ್ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.ಕೇರಳದ ಮಲ್ಲಂಪುರಂ ಮೂಲದ ಸೇಸಾದ್(೩೦), ಮುಸ್ಕಾನ್(೧೯) ಸಾವನ್ನಪ್ಪಿದವರು. ಕಾರಲ್ಲಿದ್ದ ಸಾಜೀಯ ತಲೆ ಹಾಗೂ ತೊಡೆಗೆ ತೀವ್ರ ಪೆಟ್ಟು ಬಿದ್ದಿದೆ. ಟಿಟಿ ಚಾಲಕ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನಗರ್ಲೆ ಗ್ರಾಮದ ಸಾಗರ್ ನ ಕಾಲು ತುಂಡಾಗಿದೆ. ಕಾರಲ್ಲಿದ್ದ ಮಕ್ಕಳು ಸೇರಿದಂತೆ ಆರು ಮಂದಿಗೆ ಗಾಯಗಳಾಗಿವೆ.
ಗುಂಡ್ಲುಪೇಟೆ ಕಡೆಯಿಂದ ಬರುತ್ತಿದ್ದ ಕೆಎಲ್ ೮ ಬಿ ೦೩೭೨ ನಂಬರಿನ ನಿಶಾನ್ ಕಾರು ಬೆಂಡಗಳ್ಳಿ ಗೇಟ್ ಬಳಿ ಬೇಗೂರು ಕಡೆಯಿಂದ ಬರುತ್ತಿದ್ದ ಕೆಎ ೪೧ ಎ ೦೮೧೩ ನಂಬರಿನ ಟೆಂಪೋ ಟ್ರಾವೆಲ್ಲರ್(ಟಿಟಿ) ಡಿಕ್ಕಿ ಹೊಡೆದಾಗ ಈ ಅವಘಡ ಸಂಭವಿಸಿದೆ. ಅಪಘಾತದ ಬಳಿಕ ಗಾಯಗೊಂಡವರನ್ನು ಗುಂಡ್ಲುಪೇಟೆ, ಬೇಗೂರು ಹಾಗೂ ಮೈಸೂರು ಆಸ್ಪತ್ರೆಗೆ ಸ್ಥಳೀಯ ಪೊಲೀಸರು ಹಾಗೂ ಸಾರ್ವಜನಿಕರು ದಾಖಲಿಸಿದ್ದಾರೆ.ಅಪಘಾತದ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಕಾರಿನ ಚಾಲಕ ನಿದ್ದೆಗೆ ಜಾರಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಪ್ರವಾಸಕ್ಕೆ ತೆರಳುತ್ತಿದ್ದರು:ರಂಜಾನ್ ಹಬ್ಬ ಮುಗಿದ ಬಳಿಕ ಕೇರಳ ರಾಜ್ಯದ ಮಲ್ಲಪುರಂನಿಂದ ನಿಶಾನ್ ಕಾರಲ್ಲಿ ಮೈಸೂರು ಕಡೆಗೆ ಬರುತ್ತಿದ್ದರು, ಆದರೆ ಎದುರು ಬಂದ ಟಿಟಿ ಮೈಸೂರು ಜಿಲ್ಲೆಯ ಬನ್ನೂರಿನಿಂದ ಊಟಿ ಪ್ರವಾಸಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತವಾದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಭೇಟಿ ನೀಡಿ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದರು.