ಸ್ಮಾರ್ಟ್‌ ಟೀವಿಗೆ ₹2 ಲಕ್ಷ, ಟಾಯ್ಲೆಟ್‌ ಕುಡ್ಡಿಗೆ ₹5 ಲಕ್ಷ!

KannadaprabhaNewsNetwork |  
Published : Dec 24, 2025, 01:15 AM IST
ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಇನ್ನೂ ಉಯೋಗಿಸದ ಆರ್ಓ ಪ್ಲಾಂಟ್‌ ದುರವಸ್ಥೆ.  | Kannada Prabha

ಸಾರಾಂಶ

‘ಹಿಂದುಳಿದ ಭಾಗ’ದ ಅಭಿವೃದ್ಧಿ ಎಂಬ ಕಾರಣಕ್ಕೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ರಾಜ್ಯ ಸರ್ಕಾರಗಳು ಅನುದಾನ ನೀಡುತ್ತವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಈ ಭಾಗಕ್ಕೆ ವಿವಿಧ ಇಲಾಖೆಗಳು ನೂರಾರು, ಸಾವಿರಾರು ಕೋಟ್ಯಂತರ ರುಪಾಯಿ ಹಣ ಬಿಡುಗಡೆ ಮಾಡುತ್ತವೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

‘ಹಿಂದುಳಿದ ಭಾಗ’ದ ಅಭಿವೃದ್ಧಿ ಎಂಬ ಕಾರಣಕ್ಕೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ರಾಜ್ಯ ಸರ್ಕಾರಗಳು ಅನುದಾನ ನೀಡುತ್ತವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಈ ಭಾಗಕ್ಕೆ ವಿವಿಧ ಇಲಾಖೆಗಳು ನೂರಾರು, ಸಾವಿರಾರು ಕೋಟ್ಯಂತರ ರುಪಾಯಿ ಹಣ ಬಿಡುಗಡೆ ಮಾಡುತ್ತವೆ.

ಆದರೆ, ಈ ಅಭಿವೃದ್ಧಿ ಅನುದಾನಗಳು ಸದ್ಬಳಕೆಯಾಗದೆ, ಬೇಕಾಬಿಟ್ಟಿ ಬೇಡಿಕೆಗಳ ಮೂಲಕ ಕೋಟ್ಯಂತರ ರುಪಾಯಿಗಳ ಹಣ ದುರ್ಬಳಕೆಗೆ ದಾರಿಯಾಗುತ್ತಿವೆ. ರಾಜಕೀಯ ಪುಢಾರಿಗಳು ಹಾಗೂ ಬೆಂಬಲಿಗರ ಅಭಿವೃದ್ಧಿಗೆಂದೇ ಬಹುತೇಕ ಕಡೆಗಳಲ್ಲಿ ಅನಾವಶ್ಯಕ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಿ, ಅನುಮೋದನೆ ಪಡೆಯಲಾಗುತ್ತದೆ. ವಾಸ್ತವ ಪರಿಶೀಲಿಸಿದಾಗ, ಬಹುತೇಕ ಕಡೆಗಳಲ್ಲಿ ಹಣ ಲಪಟಾಯಿಸುವ ತಂತ್ರ ಅಡಗಿರುತ್ತದೆ ಎಂಬ ಆರೋಪಗಳು ಕೇಳಿ ಬರುತ್ತವೆ.

ಯಾದಗಿರಿ ಜಿಲ್ಲೆಯ ಆರು ತಾಲೂಕುಗಳಿಗೆಂದು ತಲಾ 2.20 ರಿಂದ 2.40 ಕೋಟಿ ರು.ಗಳವರೆಗೆ 2025-26ನೇ ಸಾಲಿನ ಅನಿರ್ಬಂಧಿತ ಅನುದಾನ ನಿಗದಿಯಾಗಿದೆ ಎನ್ನಲಾಗಿದೆ. ಜಿಲ್ಲೆಯ ಆಯಾ ಕಡೆಗಳಲ್ಲಿ ಬೇಕಿರುವ ಮೂಲಸೌಲಭ್ಯಗಳ ಕುರಿತು ಇಲಾಖಾವಾರು ಕ್ರಿಯಾಯೋಜನೆ ತಯಾರಿಸಿ, ಜಿಲ್ಲಾ ಪಂಚಾಯತ್‌ಗೆ ಸಲ್ಲಿಸಬೇಕು. ‘ಕನ್ನಡಪ್ರಭ’ಕ್ಕೆ ಇಂತಹದ್ದೊಂದು ಲಭ್ಯ ಕ್ರಿಯಾಯೋಜನೆ ಪಟ್ಟಿಯಲ್ಲಿನ ಕೆಲವೊಂದು ಕಾಮಗಾರಿಗಳು ಭಾರಿ ಅಚ್ಚರಿ ಮೂಡಿಸಿವೆ.

ಲಕ್ಷಾಂತರ ರು.ಗಳ ಮೌಲ್ಯದ ಬೇಕಾಬಿಟ್ಟಿ ಬೇಡಿಕೆಗಳು, ಅನಾವಶ್ಯಕ ಕಾಮಗಾರಿಗಳು, ಆರ್‌ಓ ಪ್ಲಾಂಟ್‌, ವಾಟರ್ ಪ್ಯೂರಿಫೈಯರ್‌, ಅಂಗನವಾಡಿ ಆಟಿಕೆ ಸಾಮಾನುಗಳು, ಆಸ್ಪತ್ರೆಗೆ ಸೌಲಭ್ಯಗಳ ಹೆಸರಲ್ಲಿ ನೂರೆಂಟು ತರಹದ ಔಷಧಿಗಳ ಖರೀದಿ ಪ್ರಸ್ತಾವ, ಬಹುಮೌಲ್ಯದ ತರಹೇವಾರಿ ವೈದ್ಯಕೀಯ ಉಪಕರಣಗಳು, ಅಂಗನವಾಡಿ/ಶಾಲಾ ಕೋಣೆಗೆ ಸುಣ್ಣಬಣ್ಣ ಬಳಿಯಲು 5 -6 ಲಕ್ಷ ರು. ಅಂದಾಜು, ಗ್ರಂಥಾಲಯಗಳಿಗೆ ಪುಸ್ತಕ ಖರೀದಿ, ಕಂಪ್ಯೂಟರ್‌, ಟೇಬಲ್‌, ಪೀಠೋಪಕರಣಗಳು, ಇನ್ವರ್ಟರ್‌ ಮುಂತಾದವುಗಳಿಗೆಂದು ಕ್ರಿಯಾಯೋಜನೆ ತಯಾರಿಸಲಾಗಿದೆ.

ಶಾಲೆಗಳಿಗೆ ₹2 ಲಕ್ಷಗೊಂದರಂತೆ 30ಕ್ಕೂ ಹೆಚ್ಚು ಸ್ಮಾರ್ಟ್‌ ಟೀವಿಗಳು, ಟಾಯ್ಲೆಟ್‌ ಕುಡ್ಡಿ-ಪೈಪ್‌ಲೈನ್‌ಗೆಂದು ₹5 ಲಕ್ಷ, ಕಿಟಕಿ-ಬಾಗಿಲು ದುರಸ್ತಿ ಹಾಗೂ ಸುಣ್ಣಬಣ್ಣಕ್ಕೆ ₹4 ಲಕ್ಷ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕಲಿಕಾ ಸಾಮಗ್ರಿಗಳಿಗೆ 2 ರಿಂದ 5 ಲಕ್ಷ ರು., ಆರ್‌ಓ ಪ್ಲಾಂಟಿಗೆ ₹4.5- ರಿಂದ ₹5 ಲಕ್ಷ, ವಾಟರ್ ಪ್ಯೂರಿಫೈಯರ್‌ಗೆ 65 ರಿಂದ 80 ಸಾವಿರ ರು. ಹೀಗೆ ಕ್ರಿಯಾಯೋಜನೆಯ ಪಟ್ಟಿಯ ಅನೇಕ ಕಡೆಗಳಲ್ಲಿ ಉಲ್ಲೇಖಿಸಿದ ಅಂಶಗಳು ಅಚ್ಚರಿ ಮೂಡಿಸುತ್ತವೆ.

ಅನುಮೋದನೆಗೆ ಜಿಪಂ ಸಿಇಒ ತಡೆ

ಕ್ರಿಯಾಯೋಜನೆಗೆ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿತಯಾ ಅನುಮೋದನೆಗೆ ಬ್ರೇಕ್‌ ಹಾಕಿದ್ದು, ಆಕ್ಷೇಪಣೆಗಳನ್ನು ಸರಿಪಡಿಸುವಂತೆ ನಿರ್ದೇಶನ ನೀಡಿದ್ದಾರೆ. ಬೇಡಿಕೆಯಲ್ಲಿನ ಪ್ರತಿಯೊಂದು ಅಂಶಗಳಿಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಕೆಲವು ಕಡೆಗಳಲ್ಲಿ, ಈ ಹಿಂದೆಯೇ ಬೇರೆ ಬೇರೆ ಯೋಜನೆಗಳಲ್ಲಿ ಕಾಮಗಾರಿಗಳು ಅಥವಾ ಸಾಮಗ್ರಿಗಳನ್ನು ಪೂರೈಸಲಾಗಿದ್ದರೂ, ಮತ್ತೇ ಮತ್ತೇ ಅಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಕೆಲವೊಂದು ಕಡೆಗಳಲ್ಲಿ ಆರ್‌ಓ ಪ್ಲಾಂಟ್‌ಗಳು ಮೂಲೆಯಲ್ಲಿ ಧೂಳು ಹಿಡಿಯುತ್ತಿವೆ, ವಾಟರ್ ಪ್ಯೂರಿಫೈಯರ್ಗಳ ಉಪಯೋಗಿಸದೇ ತುಕ್ಕು ಹಿಡಿದಿವೆ. ಪೀಠೋಪಕರಣಗಳು, ಕಂಪ್ಯೂಟರ್‌, ಪುಸ್ತಕಗಳನ್ನು ಬೇರೆ ಬೇರೆ ಯೋಜನೆಗಳಡಿ ನೀಡಿದ್ದರೂ ಮತ್ತೇ ಲಕ್ಷಾಂತರ ರು.ಗಳ ಮೌಲ್ಯದ ಬೇಡಿಕೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿ ಪ್ರಸ್ತಾವಕ್ಕೆ ಸಂಪೂರ್ಣ ವಿವರಿಸುವಂತೆ ನಿರ್ದೇಶಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ