ಮುಂಡರಗಿ:ಪಟ್ಟಣದ ಕೋಟೆ ಭಾಗದಲ್ಲಿ ಗುರುವಾರ ಸಂಜೆ ಹುಚ್ಚುನಾಯಿಯೊಂದು ಒಂದು ವರ್ಷ ನಾಲ್ಕು ತಿಂಗಳಿನ ಶ್ರೀಕೇಶವ ಮಹಾಂತೇಶ ಬಳ್ಳಾರಿ ಎನ್ನುವ ಮಗುವಿನ ಮೇಲೆ ದಾಳಿ ನಡೆಸಿ ತುಟಿ ಹಾಗೂ ಮುಖದ ಮೇಲೆ ಕಚ್ಚಿ ಗಾಯಗೊಳಿಸಿದ್ದು, ಮಗುವನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಅನೇಕ ಬಾರಿ ಪತ್ರಿಕೆಗಳಲ್ಲಿ ವರದಿ ಮಾಡಿದರೂ ಸಹ ಪುರಸಭೆಯವರು ಕೇವಲ ಕಾಟಾಚಾರಕ್ಕೆ ನಾಯಿ ಹಿಡಿಯುವ ಕಾರ್ಯಕ್ಕೆ ಮುಂದಾಗಿದ್ದು, ಅದಕ್ಕಾಗಿ ಲಕ್ಷಾಂತರ ರುಪಾಯಿ ಖರ್ಚು ಹಾಕಿದ್ದಾರೆ. ಈಗಲೂ ಸಹ ಪಟ್ಟಣದಲ್ಲಿ ಸಾವಿರಾರು ಬೀದಿ ನಾಯಿಗಳಿದ್ದು, ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಇದೇ ರೀತಿ ನಿರ್ಲಕ್ಷ್ಯ ಭಾವನೆ ಮುಂದುವರೆಸಿದ್ದೇ ಆದಲ್ಲಿ ಇನ್ನೆಷ್ಟು ಮಕ್ಕಳಿಗೆ ಹಾಗೂ ಜನತೆಗೆ ಬೀದಿನಾಯಿಗಳಿಂದ ದಾಳಿಗಳಾಗುತ್ತವೆಯೇ ದೇವರೇ ಬಲ್ಲ. ತಕ್ಷಣವೇ ಪುರಸಭೆ ಬೀದಿ ನಾಯಿಗಳನ್ನು ಹಿಡಿಯಲು ಮುಂದಾಗಬೇಕು ಎಂದು ಕೋಟೆ ಭಾಗದ ಅಂದಪ್ಪ ಬಳ್ಳಾರಿ ಒತ್ತಾಯಿಸಿದ್ದಾರೆ.