ಶಹಾಪುರ: ಸಗರನಾಡಿನ ಆರಾಧ್ಯ ದೈವ ದಿಗ್ಗಿ ಸಂಗಮೇಶ್ವರ ಮತ್ತು ಭೀಮರಾಯನ ಗುಡಿಯ ಬಲ ಭೀಮೇಶ್ವರರ ಜೋಡು ಪಲ್ಲಕ್ಕಿ ಉತ್ಸವ ಭಕ್ತ ಸಾಗರದ ಮಧ್ಯೆ, ಶ್ರದ್ಧಾ ಭಕ್ತಿ, ಸಂಭ್ರಮದಿಂದ ದೀವಟಿಗೆ ಬೆಳಕಲ್ಲಿ ಜರುಗಿತು.
ಬಲಭೀಮೇಶ್ವರ ಪಲ್ಲಕ್ಕಿ ನಗರದ ಹನುಮಾನ್ ದೇವಾಲಯದ ಸನ್ನಿಧಿಗೆ ಆಗಮಿಸುತ್ತಿದ್ದಂತೆಯೇ, ನೂರಾರು ಸಂಖ್ಯೆಯಲ್ಲಿ ಜನ ಉರುಳು ಸೇವೆ, ದೀಡ್ ನಮಸ್ಕಾರ, ನೈವೇದ್ಯ ಅರ್ಪಿಸಿ ತಮ್ಮ ಹರಕೆಯನ್ನು ತೀರಿಸಿದರು. ನಂತರ ದಿಗ್ಗಿ ಸಂಗಮೇಶ್ವರ ಪಲ್ಲಕ್ಕಿ ಆಗಮಿಸುತ್ತಿದ್ದಂತೆ ಇಲ್ಲಿಯೂ ಸಹ ಭಕ್ತರು ತಮ್ಮ ಹರಕೆಗಳನ್ನು ತೀರಿಸಿದರು.
ರಾತ್ರಿಯಿಡೀ ದೀವಟಿಗೆ ಉರಿಯಲು ನಗರದ ಬಹುತೇಕ ಕಿರಣಿ ಅಂಗಡಿಗಳ ಮುಂದೆ ಸಂಗಯ್ಯನ ಡಬ್ಬಿ, ಭೀಮರಾಯನ ಡಬ್ಬಿ ಪ್ರತ್ಯೇಕವಾಗಿ ಇಟ್ಟಿದ್ದರು. ಇಚ್ಛೆಯುಳ್ಳ ಭಕ್ತರು ಎಣ್ಣೆ ದಾನ ಮಾಡಿದರು. ಉಭಯ ಪಲ್ಲಕ್ಕಿಗಳಿಗೆ ರಾತ್ರಿವಿಡೀ ಭಕ್ತರ ಎಣ್ಣೆಯಿಂದ ದೀವಟಿಗೆ ಉರಿಯಿತು. ಪಲ್ಲಕ್ಕಿ ಹೊರುವ ಭಕ್ತರು ಮತ್ತು ಪಲ್ಲಕ್ಕಿ ಉತ್ಸವ ನೋಡಲು ವಿವಿಧ ಗ್ರಾಮಗಳಿಂದ ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಜಾತಿ, ಧರ್ಮ, ಮತ, ಪಂಥ ಮರೆತು ಎಲ್ಲಾ ಧರ್ಮದವರು ಪಲ್ಲಕ್ಕಿ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಸಗರನಾಡು ಶರಣರ ಬೀಡು ಎನ್ನುವುದಕ್ಕೆ ಈ ಹಬ್ಬವೇ ಸಾಕ್ಷಿಯಾಗಿದೆ ಎಂದು ಸೇವಾ ಸಮಿತಿಯ ಸದಸ್ಯ ಸಣ್ಣ ನಿಂಗಪ್ಪ ನಾಯ್ಕೋಡಿ, ಬಲಭೀಮೇಶ್ವರ ಹೇಳಿದ್ದಾರೆ.