ಎರಡು ಪ್ರತ್ಯೇಕ ಕಳ್ಳತನ ಪ್ರಕರಣ: ಇಬ್ಬರು ಕಳ್ಳರ ಬಂಧನ

KannadaprabhaNewsNetwork | Published : Aug 8, 2024 1:44 AM

ಸಾರಾಂಶ

ನರಸಿಂಹರಾಜಪುರ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ಭದ್ರಾವತಿಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 70 ಸಾವಿರ ರು. ನಗದು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ ಭದ್ರಾವತಿಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 70 ಸಾವಿರ ರು. ನಗದು ವಶಪಡಿಸಿಕೊಂಡಿದ್ದಾರೆ.

ಭದ್ರಾವತಿಯ ಅರುಣ ಹಾಗೂ ಭದ್ರಾವತಿ ತಾಲೂಕಿನ ಬುಳ್ಳಾಪುರ ಗ್ರಾಮದ ಆಕಾಶ್‌ ಬಂಧಿತ ಆರೋಪಿಗಳು.

2023 ರ ಜುಲೈ 29 ರಂದು ಬಿ.ಎಚ್‌.ಕೈಮರದ ಗಣಪತಿ ದೇವಸ್ಥಾನದ ಬೀಗ ಮುರಿದು ಪೂಜಾ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ನಂತರ 2023 ರ ಆಗಸ್ಟ್‌ 18 ರಂದು ಶೆಟ್ಟಿಕೊಪ್ಪದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲೂ ಸಹ ಹಿತ್ತಾಳೆ ಹಾಗು ಇತರ ವಸ್ತುಗಳನ್ನು ಕಳ್ಳರು ಕದ್ದಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಇತ್ತೀಚೆಗೆ ಅಂದರೆ 2024 ರ ಜುಲೈ 30 ರಂದು ತೀರ್ಥಹಳ್ಳಿಯಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದ ಆರೋಪಿ ಆಕಾಶನ ಬೆರಳಚ್ಚು ಹಾಗೂ ನರಸಿಂಹರಾಜಪುರದಲ್ಲಿ ಕಳ್ಳತನ ಮಾಡಿದ್ದ ಕಳ್ಳರ ಬೆರಳಚ್ಚು ಪರಸ್ಪರ ಹೋಲಿಕೆಯಾಗಿದೆ ಎಂದು ಜಿಲ್ಲಾ ಬೆರಳಚ್ಚು ವಿಭಾಗದಿಂದ ವರದಿ ಬಂದಿದ್ದರಿಂದ ತೀರ್ಥಹಳ್ಳಿಯಲ್ಲಿ ಸಿಕ್ಕಿದ್ದ ಆರೋಪಿಗಳನ್ನು ಇಲ್ಲಿಗೆ ಕರೆ ತಂದು ವಿಚಾರಣೆ ಮಾಡಿದಾಗ ಎರಡು ಪ್ರಕರಣಗಳಲ್ಲಿ ಇವರ ಕೈವಾಡವಿರುವುದು ತಿಳಿದಿದ್ದು, ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳು ಕದ್ದ ಮಾಲನ್ನು ಭದ್ರಾವತಿ ರೇಣುಕಮ್ಮ ಎಂಬ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿ ದ್ದಾರೆ. ಆರೋಪಿಗಳಿಂದ 70 ಸಾವಿರ ರು. ನಗದು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್‌ ರಕ್ಷಣಾಧಿಕಾರಿ ವಿಕ್ರಂ ಆಮಟೆ ಹಾಗೂ ನರಸಿಂಹರಾಜಪುರ ಸಿಪಿಐ ಗುರುದತ್ ಕಾಮತ್‌ ಮಾರ್ಗ ದರ್ಶನದಲ್ಲಿ ಇಲ್ಲಿನ ಪೊಲೀಸ್‌ ಠಾಣಾಧಿಕಾರಿ ನಿರಂಜನಗೌಡ, ಪಿಎಸ್‌ಐ ಜ್ಯೋತಿ, ಎಎಸ್ಐ ನಟರಾಜ, ಸಿಬ್ಬಂದಿ ಬಸಂತ ಕುಮಾರ್, ಪರಮೇಶ್‌,ಬಿನು, ಯುವರಾಜ್‌,ಕೌಶಿಕ್‌, ಗಿರೀಶ್‌ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಯಿತು.

Share this article