ಕನ್ನಡಪ್ರಭ ವಾರ್ತೆ ಬಂಟ್ವಾಳ
ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಸಮೀಪದ ಸುಜೀರು ಎಂಬಲ್ಲಿರುವ ಶ್ರೀ ದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಸೋಮವಾರ ಮುಂಜಾನೆ ಸುಮಾರು 4 ಗಂಟೆಗೆ 2.30 ಲಕ್ಷ ರು. ಮೌಲ್ಯದ ನಗನಗದುಗಳನ್ನು ಕಳ್ಳರು ಎಗರಿಸಿದ್ದಾರೆ.
ದೇವಳಕ್ಕೆ ಸಂಬಂಧಿಸಿದಂತೆ ಅನಾಧಿಕಾಲದ ನೂರಾರು ವರ್ಷಗಳ ಹಳೆಯದಾದ ಹಿರಿಯರು ಮಾಡಿಸಿದಂತ ಸುಮಾರು ಒಂದುವರೆ ಕೆ.ಜಿ.ತೂಕದ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ದೇವರ ಮೂಗುತಿ ದೇವರ ಕೊಡೆ ಸೇರಿದಂತೆ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ ಕಳವಾಗಿದೆ. ಇದರ ಜೊತೆಗೆ ಕಾಣಿಕೆ ಹುಂಡಿಯಲ್ಲಿರುವ ನಗದು ದೋಚಿದ್ದಾರೆ.ಸಿ.ಸಿ.ಕ್ಯಾಮರಾದಲ್ಲಿ ಸೆರೆ
ಸುಳಿವು ನೀಡಿದ ನಾಯಿ:
ದೇವಸ್ಥಾನದ ಕಂಪೌಂಡ್ ನ ಒಳಗಡೆಯೇ ಅರ್ಚಕರ ಮನೆಯಿದೆ. ಕಳ್ಳರು ದೇವಸ್ಥಾನದ ಒಳಗೆ ಪ್ರವೇಶ ಮಾಡುವುದನ್ನು ಇವರ ಸಾಕು ನಾಯಿ ಗಮನಿಸಿ ಜೋರಾಗಿ ಬೊಗಳಲು ಆರಂಭಿಸಿದೆ. ನಾಯಿಯ ಬೊಗಳಿದ್ದರಿಂದ ಅರ್ಚಕರಿಗೆ ಎಚ್ಚರವಾಗಿದೆ.ನಾಯಿ ಯಾಕೆ ಬೊಗಳುತ್ತಿದೆ ಎಂದು ಸಿ.ಸಿ.ಕ್ಯಾಮರಾವನ್ನು ನೋಡಿದಾಗ ದೇವಸ್ಥಾನದ ಒಳಗೆ ಮೂವರು ಕಂಡುಬಂದಿದ್ದಾರೆ. ಕೂಡಲೇ ಅರ್ಚಕರು ದೇವಸ್ಥಾನದ ಮ್ಯಾನೇಜರ್ ಅವರಿಗೆ ವಿಚಾರ ತಿಳಿಸಿದ್ದಾರೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮೂವರು ದೇವಸ್ಥಾನದ ಒಳಗೆ ಇದ್ದು, ತನಗೆ ಒಬ್ಬನಿಗೆ ಹೋಗಲು ಹೆದರಿಕೆ ಆಗುತ್ತಿದ್ದು ಅವರನ್ನು ಬರುವಂತೆ ತಿಳಿಸಿದ್ದಾರೆ. ಕೂಡಲೇ ಅವರು ಇಲ್ಲಿಗೆ ಬಂದರಾದರೂ ಅದಾಗಲೇ ಕಳ್ಳರು ಕಾಲ್ಕಿತ್ತಿದ್ದಾರೆ.
ರಾತ್ರಿ ತುಂಬೆ ದೇವಳಕ್ಕೆ...:ತಾಲೂಕಿನ ತುಂಬೆಯಲ್ಲಿರುವ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಬಾಗಿಲಿನ ಚಿಲಕ ಮುರಿದು ಸೋಮವಾರ ರಾತ್ರಿ ಒಳಗೆ ಪ್ರವೇಶ ಮಾಡಿದ ಕಳ್ಳರು ಸುಮಾರು ರು. 2 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಹೇಳಲಾಗಿದೆ.
ಕಚೇರಿಯಲ್ಲಿರಿಸಿದ್ದ ಸುಮಾರು ಒಂದುವರೆ ಕೆ.ಜಿ ತೂಕದ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಜಲದ್ರೋಣವನ್ನು ಕಳ್ಳತನ ಮಾಡಲಾಗಿದೆ. ಸುಮಾರು 50 ಸಾವಿರ ರು.ಯಷ್ಟು ನಗದು ಕಳವಾಗಿದೆ.ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರೂ. ಕಳ್ಳರ ತಂಡ ಕಳ್ಳರ ತಂಡ ಕ್ಯಾಮರಾ ಡಿ.ವಿಆರ್ ನ್ನು ಕೂಡ ಬಿಡದೆ ಎಗರಿಸಿದೆ.
ಮಂಗಳವಾರ ಬೆಳಗ್ಗೆ ದೇವಸ್ಥಾನದ ಸಿಬ್ಬಂದಿ ಬಂದಾಗ ಕಳವಿನ ಅರಿವಾಗಿದ್ದು ಅವರು ದೇವಸ್ಥಾನದ ಸೇವಾ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ತುಂಬೆಗೆ ತಿಳಿಸಿದ್ದಾರೆ.ಬಂಟ್ವಾಳ ಪೊಲೀಸರು ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.