ರಾಘು ಕಾಕರಮಠ
ಕೆನರಾ ವೃತ್ತದ ಕಾರವಾರ ಅರಣ್ಯ ವಿಭಾಗದಲ್ಲಿ 2026ನೇ ಸಾಲಿನಲ್ಲಿ ನಡೆದ ಹುಲಿ ಗಣತಿಯ ವೇಳೆ ಅಂಕೋಲಾ ಉಪವಿಭಾಗದ ಗುಳೆ, ಕೋಟೆಬಾವಿ ಹಾಗೂ ಮಲ್ಲಾಣಿ ಅರಣ್ಯ ಪ್ರದೇಶಗಳಲ್ಲಿ ಎರಡು ಹುಲಿಗಳ ಅಸ್ತಿತ್ವ ಖಚಿತವಾಗಿದೆ. ಕರಾವಳಿ ಭಾಗದ ಅರಣ್ಯ ಪರಿಸರದ ಸಮೃದ್ಧಿಗೆ ಇದು ಮಹತ್ವದ ಸಾಕ್ಷಿ ಒದಗಿಸಿದೆ.
ಕಾರವಾರ ಅರಣ್ಯ ವಿಭಾಗವು ಒಟ್ಟು 1,18,561.352 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೊಂದಿದ್ದು, ನಿತ್ಯ ಹರಿದ್ವರ್ಣ ಕಾಡುಗಳಿಂದ ಹಿಡಿದು, ಕುರುಚಲು ಅರಣ್ಯಗಳ ವರೆಗೆ ವೈವಿಧ್ಯಮಯ ಪರಿಸರವನ್ನು ಒಳಗೊಂಡಿದೆ. ಇದರಲ್ಲಿ ಅಂಕೋಲಾ ವಲಯವು 24,768.411 ಹೆಕ್ಟೇರ್ ಅರಣ್ಯ ಪ್ರದೇಶ ಹಾಗೂ ಏಳು ಉಪವಲಯಗಳನ್ನು ಹೊಂದಿದೆ.ಕಳೆದ ಮೇ ತಿಂಗಳಲ್ಲಿ ನಡೆದ ಹುಲಿ ಗಣತಿಗಾಗಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ಎರಡು ಹುಲಿಗಳು ಪ್ರತ್ಯೇಕವಾಗಿ ಕಂಡುಬಂದಿವೆ. ಈ ಮಾಹಿತಿಯನ್ನು ಟೈಗರ್ ಸೆಲ್, ಬೆಂಗಳೂರು ಹಾಗೂ ಡಬ್ಲ್ಯೂಆರ್‌ಟಿಸಿ, ದಾಂಡೇಲಿ ತಜ್ಞರು ಪರಿಶೀಲಿಸಿ ದೃಢಪಡಿಸಿದೆ. ಇವುಗಳಲ್ಲಿ ಒಂದು ಮಧ್ಯವಯಸ್ಸಿನ ಗಂಡು ಹುಲಿ ನಾಗರಹೊಳೆ ಅರಣ್ಯ ಪ್ರದೇಶದಿಂದ ಸುಮಾರು 360 ಕಿಲೋಮೀಟರ್ ದೂರ ಕ್ರಮಿಸಿ ಅಂಕೋಲಾ ಅರಣ್ಯಕ್ಕೆ ವಲಸೆ ಬಂದಿದೆ. ಮತ್ತೊಂದು ಹೆಣ್ಣು ಹುಲಿ ಪಕ್ಕದ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಬಂದಿರುವುದು ಖಚಿತವಾಗಿದೆ.
ಅಂಕೋಲಾ ಅರಣ್ಯ ಪ್ರದೇಶದಲ್ಲಿ ಚಿರತೆ, ಕಾಡುಕೋಣ, ಕಡವೆ, ಮುಳ್ಳುಹಂದಿ, ಕಾಡುಕುರಿ ಸೇರಿದಂತೆ ಅನೇಕ ವನ್ಯಜೀವಿಗಳು ವಾಸಿಸುತ್ತಿದ್ದು, ಸಮೃದ್ಧ ಆಹಾರ ಸರಪಳಿ ಹುಲಿಗಳ ನೆಲೆಸುವಿಕೆಗೆ ಪೂರಕವಾಗಿದೆ.
ಒಟ್ಟಾರೆ, ಕರಾವಳಿ ತೀರದ ಅಂಕೋಲಾ ಅರಣ್ಯದಲ್ಲಿ ರಾಷ್ಟ್ರಪ್ರಾಣಿ ಹುಲಿಗಳು ನೆಲೆಸಿರುವುದು ಇಲ್ಲಿನ ಅರಣ್ಯ ಸಂಪತ್ತಿನ ಸಮೃದ್ಧಿ, ಪರಿಸರದ ಆರೋಗ್ಯ ಹಾಗೂ ಅರಣ್ಯ ಸಿಬ್ಬಂದಿಯ ನಿರಂತರ ಕಾಡು ಸಂರಕ್ಷಣಾ ಕಾರ್ಯಕ್ಕೆ ದೊರೆತ ಅತ್ಯುತ್ತಮ ಮನ್ನಣೆಯಾಗಿದೆ.