ಕ್ಷೇತ್ರದಲ್ಲಿ ಮತದಾನಕ್ಕೆ ಎರಡು ಯೂನಿಟ್‌ ಮತಯಂತ್ರ

KannadaprabhaNewsNetwork | Published : Apr 13, 2024 1:01 AM

ಸಾರಾಂಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಗೆ ಒಟ್ಟು 29 ಅಭ್ಯರ್ಥಿಗಳು ಹಾಗೂ ನೋಟಾ ಇರುವುದರಿಂದ ಚುನಾವಣೆಯಲ್ಲಿ ಎರಡು ಬ್ಯಾಲೆಟ್ ಯುನಿಟ್(ಮತಯಂತ್ರ) ಗಳನ್ನು ಬಳಕೆ ಮಾಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಗೆ 29 ಅಭ್ಯರ್ಥಿಗಳು ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ 2 ಬ್ಯಾಲೆಟ್ ಯುನಿಟ್(ಮತಯಂತ್ರ) ಗಳನ್ನು ಚುನಾವಣೆಗೆ ಬಳಸಲಾಗುವುದೆಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಸಂಬಂಧ ಕರೆಯಲಾಗಿದ್ದ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಗೆ ಒಟ್ಟು 29 ಅಭ್ಯರ್ಥಿಗಳು ಹಾಗೂ ನೋಟಾ ಇರುವುದರಿಂದ ಚುನಾವಣೆಯಲ್ಲಿ ಎರಡು ಬ್ಯಾಲೆಟ್ ಯುನಿಟ್(ಮತಯಂತ್ರ) ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದರು.ಕ್ಷೇತ್ರದಲ್ಲಿ 19,81,347 ಮತದಾರರು

ಚುನಾವಣೆಗೆ ಮತದಾರರ ಪಟ್ಟಿಯಲ್ಲಿ 9,83,775 ಪುರುಷರು, 9,97,306 ಮಹಿಳೆಯರು ಹಾಗೂ ಇತರರು 266 ಸೇರಿದಂತೆ ಒಟ್ಟು 19,81,347 ಮತದಾರರಿದ್ದಾರೆ. ಒಟ್ಟು 2326 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ ನಗರ ಪ್ರದೇಶದಲ್ಲಿ 536 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 1790 ಇರಲಿವೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 1639 ಮತದಾರರು ಮತ್ತು 763 ವಿಕಲಚೇತನ ಮತದಾರರು ಸೇರಿದಂತೆ ಒಟ್ಟು 2402 ಮತದಾರರು ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಇವರಿಗೆ ಏ.13 ರಿಂದ 18 ರವರೆಗೆ ಐದು ದಿನಗಳ ಕಾಲ ಮನೆ ಮತದಾನ ನಡೆಯಲಿದೆ ಎಂದು ತಿಳಿಸಿದರು.

ಇವಿಎಂ ರಕ್ಷಣೆಗೆ ಭದ್ರತಾ ಕೊಠಡಿ

ದೇವನಹಳ್ಳಿ ತಾಲೂಕಿನ ಮುದುಗುರ್ಕಿಯ ನಾಗಾರ್ಜುನ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ ಎಣಿಕಾ ಕೇಂದ್ರವಾಗಿದ್ದು, ಇಲ್ಲಿ ಏ. 26 ರಂದು ಮತದಾನ ಮುಕ್ತಾಯವಾದ ನಂತರ ಮತ ಚಲಾಯಿಸಲಾಗಿರುವ ಇ.ವಿ.ಎಂ ಗಳನ್ನು ಭದ್ರತಾ ಕೊಠಡಿಯಲ್ಲಿ ಭದ್ರಪಡಿಸಿ ಕೇಂದ್ರ ಮೀಸಲು ಪೊಲೀಸ್ ಪಡೆಗೆ ಹಸ್ತಾಂತರಿಸಲಾಗುವುದು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ, ಚಿಕ್ಕಬಳ್ಳಾಪುರ ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಬೆಂಗಳೂರು ಗ್ರಾಮಾಂತ ಜಿಪಂ ಸಿಇಒ ಡಾ. ಕೆ.ಎನ್. ಅನುರಾಧ, ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ್, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಚಿಕ್ಕಬಳ್ಳಾಪುರ ಅಪರ ಡೀಸಿ ಡಾ. ಎನ್. ತಿಪ್ಪೇಸ್ವಾಮಿ, ಅಭ್ಯರ್ಥಿಗಳು, ಅವರ ಪರ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು.

Share this article