ಎಚ್.ಜಿ.ರವಿಕುಮಾರ್
ಕನ್ನಡಪ್ರಭ ವಾರ್ತೆ ಮದ್ದೂರುಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಸತತ ಮೂರು ಬಾರಿ ಆಯ್ಕೆಯಾಗಿರುವ ಯು.ಸಿ.ಶಿವಕುಮಾರ್ ಒಕ್ಕೂಟದ ಅಧ್ಯಕ್ಷ ಸ್ಥಾನ ಅಲಂಕರಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಒಂದು ವರ್ಷದ ಅವಧಿಗೆ ಅಧಿಕಾರ ಹಂಚಿಕೆ ಒಪ್ಪಂದವಾಗಿದೆ ಎನ್ನಲಾಗಿದ್ದು, ಎರಡು ವರ್ಷದ ಅವಧಿಗೆ ಉಪಾಧ್ಯಕ್ಷ ಸ್ಥಾನವನ್ನು ಮಳವಳ್ಳಿಯ ಕೃಷ್ಣೇಗೌಡ ಮತ್ತು ಎರಡೂ ವರೆ ವರ್ಷದ ಅವಧಿಗೆ ಕೆಎಂಎಫ್ ನಿರ್ದೇಶಕ ಸ್ಥಾನವನ್ನು ಎನ್.ಅಪ್ಪಾಜಿಗೌಡ ಅವರಿಗೆ ನೀಡಲು ಪಕ್ಷದ ನಾಯಕರ ಸಮ್ಮುಖದ ನಡೆದ ಚರ್ಚೆಯಲ್ಲಿ ಅಂತಿಮವಾಗಿದೆ ಎಂದು ಖಚಿತ ಮೂಲಗಳು ತಿಳಿಸಿವೆ.
ಅಧ್ಯಕ್ಷ ಸ್ಥಾನಕ್ಕೆ ಮಂಡ್ಯದಿಂದ ಯು.ಸಿ.ಶಿವಕುಮಾರ್, ನಾಗಮಂಗಲದಿಂದ ಎನ್.ಅಪ್ಪಾಜಿಗೌಡ, ಮದ್ದೂರು ತಾಲೂಕಿನಿಂದ ಎಂ.ಕೆ.ಹರೀಶ್‌ಬಾಬು ಆಕಾಂಕ್ಷಿಯಾಗಿದ್ದರು. ಯು.ಸಿ.ಶಿವಕುಮಾರ್ ಸತತ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಅಧ್ಯಕ್ಷ ಸ್ಥಾನಕ್ಕೇರುವುದಕ್ಕೆ ಪ್ಲಸ್ ಪಾಯಿಂಟ್ ಆಯಿತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಎನ್.ಅಪ್ಪಾಜಿಗೌಡ, ಎಂ.ಕೆ. ಹರೀಶ್‌ಬಾಬು ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದರಿಂದ ಅವರಿಗೆ ಹಿನ್ನಡೆಯಾಯಿತು.ಅಧ್ಯಕ್ಷ ಸ್ಥಾನಕ್ಕೇರುವುದಕ್ಕೆ ನಿರ್ದಿಷ್ಟ ನಿಯಮವಿಲ್ಲವಾದರೂ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಯು.ಸಿ. ಶಿವಕುಮಾರ್ ಅಧ್ಯಕ್ಷರಾಗುವುದಕ್ಕೆ ಪ್ರಮುಖ ಕಾರಣವಾಯಿತು. ಆರಂಭದಿಂದಲೂ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿಗರಾಗೇ ಗುರುತಿಸಿಕೊಂಡು ಬಂದಿರುವ ಯು.ಸಿ.ಶಿವಕುಮಾರ್‌ಗೆ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ಸಚಿವರೂ ಗ್ರೀನ್ ಸಿಗ್ನಲ್ ನೀಡಿದರು.
ಜೆಡಿಎಸ್ ಪಕ್ಷದಲ್ಲಿದ್ದ ಎನ್.ಅಪ್ಪಾಜಿಗೌಡ ಅವರನ್ನು ಮನ್‌ಮುಲ್ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಚಲುವರಾಯಸ್ವಾಮಿ ಅವರು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದರು. ಯು.ಸಿ.ಶಿವಕುಮಾರ್ ಗೆಲ್ಲದಿದ್ದ ಪಕ್ಷದಲ್ಲಿ ಅಪ್ಪಾಜಿಗೌಡರೇ ಅಧ್ಯಕ್ಷರಾಗುವುದು ಬಹುತೇಕ ನಿಶ್ಚಿತವಾಗಿತ್ತು. ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಯು.ಸಿ.ಶಿವಕುಮಾರ್ ಗೆಲುವು ಎನ್.ಅಪ್ಪಾಜಿಗೌಡರು ಅಧ್ಯಕ್ಷರಾಗುವ ಕನಸನ್ನು ನುಚ್ಚುನೂರು ಮಾಡಿತು. ಕೊನೆಗೆ ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ:
ಮನ್‌ಮುಲ್ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಸಂಬಂಧ ಸೋಮವಾರ ಸಂಜೆ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಮುಖಂಡರು ಹಾಗೂ ಮನ್‌ಮುಲ್‌ನ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರೊಂದಿಗೆ ಸಭೆ ನಡೆಸಿದರು. ಮನ್‌ಮುಲ್‌ಗೆ ಮೂರು ಬಾರಿ ಆಯ್ಕೆಯಾಗಿರುವ ಯು.ಸಿ.ಶಿವಕುಮಾರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಲಾಯಿತು. ಒಂದು ವರ್ಷಕ್ಕೆ ಅಧಿಕಾರ ಹಂಚಿಕೆ ಸೂತ್ರಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನವನ್ನು ಮಳವಳ್ಳಿ ಕೃಷ್ಣೇಗೌಡರಿಗೆ ಎರಡೂವರೆ ವರ್ಷ ಹಾಗೂ ಕೆಎಂಎಫ್ ನಿರ್ದೇಶಕ ಸ್ಥಾನವನ್ನು ಎರಡೂವರೆ ವರ್ಷದ ಅವಧಿಗೆ ಎನ್.ಅಪ್ಪಾಜಿಗೌಡರಿಗೆ ಬಿಟ್ಟುಕೊಡುವುದಕ್ಕೆ ಸಭೆಯಲ್ಲಿದ್ದವರು ಸಹಮತ ವ್ಯಕ್ತಪಡಿಸಿದರು. ಒಂದು ವರ್ಷದ ಬಳಿಕ ಮುಂದಿನ ಅಧ್ಯಕ್ಷರು ಯಾರಾಗಬೇಕೆಂಬ ಬಗ್ಗೆ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಲು ನಿರ್ಧರಿಸಲಾಯಿತು.ಅದೇ ರೀತಿ ಮಂಗಳವಾರದಂದು ಬೆಳಗ್ಗೆ ಮದ್ದೂರಿನ ಪ್ರವಾಸಿಮಂದಿರದಲ್ಲಿ ಮನ್‌ಮುಲ್‌ನ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಸಭೆ ಸೇರಿ ಅಧ್ಯಕ್ಷ ಸ್ಥಾನಕ್ಕೆ ಯು.ಸಿ.ಶಿವಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣೇಗೌಡ ಅವರು ನಾಮಪತ್ರ ಸಲ್ಲಿಸುವಂತೆ ನಿರ್ಧಾರ ಮಾಡಿದರು. ಯು.ಸಿ.ಶಿವಕುಮಾರ್‌ಗೆ ಎದುರಾಗಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ ಯಾವೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಲೇ ಇಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಮಳವಳ್ಳಿ ಕೃಷ್ಣೇಗೌಡರಿಗೆ ಎದುರಾಗಿ ಜೆಡಿಎಸ್ ಪಕ್ಷದಿಂದ ಎಂ.ಎಸ್. ರಘುನಂದನ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೂ ಹೈಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
ಮನ್‌ಮುಲ್ ಅಧ್ಯಕ್ಷ ಸ್ಥಾನವನ್ನು ಮದ್ದೂರು ತಾಲೂಕಿಗೆ ನೀಡಬೇಕೆಂದು ಶಾಸಕ ಕದಲೂರು ಉದಯ್ ವರಿಷ್ಠರೆದುರು ಪಟ್ಟು ಹಿಡಿದಿದ್ದರು. ತಮ್ಮ ಸಂಬಂಧಿ ಎಂ.ಕೆ.ಹರೀಶ್‌ಬಾಬು ಅವರಿಗೆ ಅಧ್ಯಕ್ಷ ಪಟ್ಟ ನೀಡುವುದಕ್ಕೆ ಪ್ರಯತ್ನಿಸಿದ್ದರು. ಮನ್‌ಮುಲ್ ಅಧ್ಯಕ್ಷರಾಗುವುದಕ್ಕೆ ಇಂತಿಷ್ಟು ಬಾರಿ ಅಧ್ಯಕ್ಷರಾಗಬೇಕೆಂಬ ಯಾವ ನಿಯಮವೂ ಇಲ್ಲವೆಂದು ಟಾಂಗ್ ನೀಡಿದ್ದರು. ಆದರೆ, ಮೂರು ಬಾರಿ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾದರೆಂಬ ಒಂದು ಕಾರಣವೇ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರುವಂತೆ ಮಾಡಿತು ಎನ್ನುವುದು ಅಕ್ಷರಶಃ ಸತ್ಯ.