ಉದಯ ಕುಮಾರ್ ಹೆಬ್ಬಾರ್ ಕೆಬಿಎಲ್ ನೂತನ ಎಂಡಿ, ಸಿಇಒ

KannadaprabhaNewsNetwork |  
Published : Nov 20, 2026, 02:45 AM IST
ಉದಯ ಕುಮಾರ್ ಹೆಬ್ಬಾರ್ | Kannada Prabha

ಸಾರಾಂಶ

ಖಾಸಗಿ ರಂಗದ ಮುಂಚೂಣಿಯ ಕರ್ಣಾಟಕ ಬ್ಯಾಂಕ್‌ನ ನೂತನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ಹಿರಿಯ ಬ್ಯಾಂಕರ್ ಉದಯ ಕುಮಾರ್ ಹೆಬ್ಬಾರ್ ಅವರನ್ನು ನೇಮಕ ಮಾಡಲಾಗಿದೆ.

ಮಂಗಳೂರು: ಖಾಸಗಿ ರಂಗದ ಮುಂಚೂಣಿಯ ಕರ್ಣಾಟಕ ಬ್ಯಾಂಕ್‌ನ ನೂತನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ಹಿರಿಯ ಬ್ಯಾಂಕರ್ ಉದಯ ಕುಮಾರ್ ಹೆಬ್ಬಾರ್ ಅವರನ್ನು ನೇಮಕ ಮಾಡಲಾಗಿದೆ.

ಬ್ಯಾಂಕ್‌ನ ಹೆಚ್ಚುವರಿ ನಿರ್ದೇಶಕರಾಗಿ ನೇಮಕಗೊಂಡಿರುವ ಉದಯ ಕುಮಾರ್ ಹೆಬ್ಬಾರ್ ಪೂರ್ಣಾವಧಿ ನಿರ್ದೇಶಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹುದ್ದೆಯ ಜವಾಬ್ದಾರಿ ವಹಿಸಲಿದ್ದು, ಅಧಿಕಾರ ಸ್ವೀಕರಿಸಿದ ದಿನದಿಂದ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ. ಈ ನೇಮಕಾತಿಗೆ ಷೇರುದಾರರ ಅನುಮೋದನೆ ಹಾಗೂ ಕಂಪನಿಗಳ ಕಾಯ್ದೆ 2013 ಮತ್ತು ಸಂಬಂಧಿತ ಷೇರು ಮಾರುಕಟ್ಟೆ ನಿಯಮಾವಳಿಗಳ ಅನ್ವಯ ಅಗತ್ಯ ಅನುಮೋದನೆ ಪಡೆಯಬೇಕಿದೆ.ಬ್ಯಾಂಕಿಂಗ್ ಮತ್ತು ಎನ್‌ಬಿಎಫ್‌ಸಿ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಹೆಬ್ಬಾರ್ ಬ್ಯಾಂಕಿಂಗ್ ಕಾರ್ಯಾಚರಣೆ, ವಾಣಿಜ್ಯ ಬ್ಯಾಂಕಿಂಗ್, ಗ್ರಾಮೀಣ ಮತ್ತು ಕೃಷಿ ಹಣಕಾಸು, ಮೈಕ್ರೋ ಬ್ಯಾಂಕಿಂಗ್, ಕಾರ್ಪೊರೇಟ್ ಆಡಳಿತ ಹಾಗೂ ಅಪಾಯ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ.2010ರ ಸೆಪ್ಟೆಂಬರ್‌ನಿಂದ 2015ರ ಜೂನ್‌ವರೆಗೆ ಕ್ರೆಡಿಟ್‌ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು, 2015ರ ಜೂನ್‌ನಿಂದ 2025ರ ಜೂನ್‌ವರೆಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಸಂಸ್ಥೆಯ ಮಂಡಳಿಯಲ್ಲಿ ಕಾರ್ಯನಿರ್ವಹಣೆಯೇತರ ನಿರ್ದೇಶಕರಾಗಿ ಮುಂದುವರಿದಿದ್ದರು. ಕ್ರೆಡಿಟ್‌ ಆಕ್ಸೆಸ್ ಲೈಫ್ ಇನ್ಶೂರೆನ್ಸ್ ಲಿಮಿಟೆಡ್ ಹಾಗೂ ಕ್ರೆಡಿಟ್‌ ಆಕ್ಸೆಸ್ ಇಂಡಿಯಾ ಬಿವಿ, ಆಂಸ್ಟರ್‌ಡ್ಯಾಮ್ ಸೇರಿದಂತೆ ವಿವಿಧ ಸಂಸ್ಥೆಗಳ ಮಂಡಳಿಗಳಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ.ಇದಕ್ಕೂ ಮೊದಲು ಬಾರ್ಕ್ಲೇಸ್ ಬ್ಯಾಂಕ್ ಪಿಎಲ್‌ಸಿ, ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಹಾಗೂ ಕಾರ್ಪೊರೇಷನ್ ಬ್ಯಾಂಕ್‌ಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಬ್ಯಾಂಕಿಂಗ್ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಅನುಭವ ಗಳಿಸಿದ್ದಾರೆ.ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಿ. ಅವರು ಹೆಬ್ಬಾರ್ ಅವರ ನೇಮಕಾತಿಯನ್ನು ಬ್ಯಾಂಕ್‌ನ ಬೆಳವಣಿಗೆ ಮತ್ತು ಪರಿವರ್ತನೆಯ ಮುಂದಿನ ಹಂತಕ್ಕೆ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಬಿಜಿ ಎಸ್.ಎಸ್. ಅವರು ಹೆಬ್ಬಾರ್ ಅವರ ಆಯ್ಕೆಯನ್ನು ಸ್ವಾಗತಿಸಿದ್ದು, ಅವರ ಅನುಭವ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಆಳವಾದ ತಿಳಿವಳಿಕೆ ಬ್ಯಾಂಕ್‌ನ ಬೆಳವಣಿಗೆಯ ಗುರಿಗಳನ್ನು ಸಾಧಿಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಂಕ್ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ: ಸದಾಶಿವ ಮೇತ್ರಿ
ಕಲಾ ಜಗತ್ತಿನಲ್ಲಿ ಪ್ರತಿಭೆ ಗುರುತಿಸಿಕೊಳ್ಳಿ