ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಕೇವಲ 12 ಗಂಟೆಗಳಲ್ಲಿ 60.20 ಮಿ.ಮೀ. ಮಳೆಯಾಗಿದೆ.
ಮಂಗಳವಾರ ಕೂಡ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಚಂಡಮಾರುತದ ಪರಿಣಾಮ ಇನ್ನೂ ಒಂದೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ, ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಭಾರಿ ಮಳೆಗಾಳಿಯಿಂದಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಸೋಮವಾರ ರಾತ್ರಿಯಿಡೀ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿತ್ತು. ಕಾಪು ತಾಲೂಕಿನ ಎಲ್ಲೂರು ಗ್ರಾಮದ ಶೇಖರ ಪೂಜಾರಿ ಎಂಬವರ ಹಸು ಸೋಮವಾರ ರಾತ್ರಿ ಸಿಡಿಲು ಬಡಿದು ಮೃತಪಟ್ಟಿದೆ.ಬ್ರಹ್ಮಾವರ ತಾಲೂಕಿನ 3 ಮನೆಗಳಿಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಇಲ್ಲಿನ ಕಾಡೂರು ಗ್ರಾಮದ ರಾಮಚಂದ್ರ ಆಚಾರಿ ಅವರ ಮನೆಗೆ 75,000 ರು., ನೀಲಾವರ ಗ್ರಾಮದ ರಾಧ ಶೆಟ್ಟಿ ಅವರ ಮನೆಗೆ 45,000 ರು. ಮತ್ತು ಪೆಜಮಂಗೂರು ಗ್ರಾಮದ ಭಾರತಿ ಅನಂದ ಎಂಬವರ ಮನೆಗೆ 30,000 ರು. ಗಳಷ್ಟು ನಷ್ಟವಾಗಿದೆ.----------------
ಕನ್ನಡಪ್ರಭ ವಾರ್ತೆ ಕಾರ್ಕಳಫೆಂಗಲ್ ಚಂಡಮಾರುತದ ಪರಿಣಾಮ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಾದ್ಯಂತ ಸೋಮವಾರ ಸಂಜೆಯಿಂದ ಮಂಗಳವಾರ ಮುಂಜಾನೆ ವರೆಗೆ ಸಿಡಿಲಿನಿಂದ ಕೂಡಿದ ಭಾರಿ ಮಳೆ ಸುರಿದಿದೆ.
ಅಕಾಲಿಕ ಮಳೆಗೆ ವಿವಿಧೆಡೆ ಹಾನಿಯುಂಟಾಗಿದೆ. ನೀರೆ ಗ್ರಾಮದ ಜಯಲಕ್ಷ್ಮೀ ಕುಲಾಲ್ ಅವರ ಮನೆಯ ಕಾಂಪೌಂಡ್ ಕುಸಿದು ಹಾನಿಯಾಗಿದೆ. ಬೈಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ ಗೋಡೆ ಬಿದ್ದು ನಷ್ಟ ಉಂಟಾಗಿದೆ. ನೂರಲ್ಬೆಟ್ಟು ಅಣ್ಣಾಜು ಜೈನ್ ಎಂಬವರ ವಾಸದ ಮನೆ ಮೇಲೆ ಅಡಕೆ ಮರ ಬಿದ್ದು ಸುಮಾರು ಹತ್ತು ಸಾವಿರ ರು.ಗೂ ಹೆಚ್ಚಿನ ಹಾನಿ ಸಂಭವಿಸಿದೆ.ಕಾರ್ಕಳ ನಗರದಲ್ಲಿ 154 ಮಿ.ಮೀ. ಮಳೆಯಾಗಿದ್ದರೆ, ಇರ್ವತ್ತೂರಿನಲ್ಲಿ 105.6 ಮಿ.ಮೀ., ಕೆದಿಂಜೆಯಲ್ಲಿ 178.0 ಮಿ.ಮೀ., ಅಜೆಕಾರು 63.2 ಮಿ.ಮೀ., ಸಾಣೂರು 143.8 ಮಿ.ಮೀ., ಕೆರ್ವಾಶೆ 62.2 ಮಿ.ಮೀ., ಮುಳಿಕಾರು 46.2 ಮಿ.ಮೀ., ಒಟ್ಟು ಸರಾಸರಿ 107.6 ಮಿ.ಮೀ. ಮಳೆಯಾಗಿದೆ.