ನಿತ್ಯಾನಂದ ಒಳಕಾಡು ವಿಶಿಷ್ಟ ಪ್ರತಿಭಟನೆ । ಇನ್ನಾದರೂ ಹೊಂಡ ಮುಚ್ಚೀತೆ ನಗರಸಭೆ, ಜಿಲ್ಲಾಡಳಿತ?
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ನಗರದ ಹೃದಯಭಾಗದಲ್ಲಿರುವ ನಗರಸಭೆಯ ಮುಂಭಾಗದಲ್ಲಿ ಭಾರಿ ಗಾತ್ರದ ಹೊಂಡವೊಂದನ್ನು ಸುಮಾರು 7 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಅದರಲ್ಲೀಗ ನೀರು ನಿಂತು ಕೊಳೆತು ನಾರುತ್ತಿದೆ. ಅಲ್ಲದೇ ಅಪಾಯವನ್ನು ಆಹ್ವಾನಿಸುತ್ತಿದೆ. ಈ ಬಗ್ಗೆ ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಮಂಗಳವಾರ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಭಾರಿ ಜಲಾಶಯದಂತೆ ನೀರು ತುಂಬಿರುವ ಈ ಬೃಹತ್ ಗುಂಡಿಯಲ್ಲಿ ನಿತ್ಯಾನಂದ ಅವರು ಕ್ರೇನ್ ಸಹಾಯದಿಂದ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುವ ಮೂಲಕ ಈ ಗುಂಡಿಯಿಂದ ಸಂಭವಿಸಬಹುದಾದ ಅಪಾಯದ ಬಗ್ಗೆ ನಗರದ ಜನತೆ, ನಗರಾಡಳಿತ ಮತ್ತು ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಈ ಗುಂಡಿಯನ್ನು ತಕ್ಷಣ ಮುಚ್ಚುವಂತೆ ಆಗ್ರಹಿಸಿದರು.ನಗರಸಭೆಯ ಮುಂಭಾಗದಲ್ಲಿ ಕವಿ ಮುದ್ದಣ ಮಾರ್ಗದಲ್ಲಿ ಈ ಮೊದಲಿದ್ದ ಹಾಜಿ ಅಬ್ದುಲ್ಲಾ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಖಾಸಗಿಯವರಿಗೆ ಗುತ್ತಿಗೆ ನೀಡಿತ್ತು. ಗುತ್ತಿಗೆದಾರರು ಆಸ್ಪತ್ರೆಯನ್ನು ಕೆಡವಿ 5 ಅಂತಸ್ತಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸುಮಾರು 50 ಮೀ. ಉದ್ದ ಮತ್ತು ಅಗಲ, 25 ಅಡಿ ಆಳದ ಈ ಗುಂಡಿಯನ್ನು ತೋಡಿದ್ದರು. ಆದರೆ ಆಸ್ಪತ್ರೆ ನಿರ್ಮಾಣ ಆರಂಭವಾಗಲಿಲ್ಲ.
ತೋಡಿಟ್ಟಿರುವ ಗುಂಡಿಯು ಹಾಗೆಯೇ ಇದ್ದು ಜಲಾಶಯದಂತೆ ಮಳೆ ನೀರು ತುಂಬಿಕೊಂಡಿದೆ. ಸುತ್ತಲು ವಾಣಿಜ್ಯ ಕಟ್ಟಡಗಳು, ವಸತಿ ಗೃಹಗಳು, ಮನೆಗಳು ಇದ್ದು, ಗುಂಡಿಯೊಳಗೆ ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ, ಸುತ್ತಲಿನ ಕಟ್ಟಡಗಳು ಗುಂಡಿಯೊಳಗೆ ಕುಸಿಯುವ ಭೀತಿಯನ್ನೆದುರಿಸುತ್ತಿವೆ.ಅಲ್ಲದೆ ಗುಂಡಿಯಲ್ಲಿ ಅನೇಕ ವರ್ಷಗಳಿಂದ ಸಂಗ್ರಹವಾಗಿರುವ ನೀರು ಕೊಳೆತು ದುರ್ನಾತ ಬೀರುತ್ತಿದೆ. ಮಾರಕ ರೋಗವಾಹಕ ಸೊಳ್ಳೆಗಳನ್ನು ಉತ್ಪಾದಿಸುವ ಕಾರ್ಖಾನೆಯಾಗಿ ಮಾರ್ಪಟ್ಟಿದೆ. ಆದ್ದರಿಂದ ಅಪಾಯಕಾರಿ ಗುಂಡಿಯನ್ನು ತಕ್ಷಣ ಮುಚ್ಚಬೇಕು ಎಂದು ನಿತ್ಯಾನಂದ ಒಳಕಾಡು ಆಗ್ರಹಿಸಿದರು.
ಈ ಸಂದರ್ಭ ಹಿರಿಯ ಸಾಮಾಜಿಕ ಹೋರಾಟಗಾರ, ಮನೋವೈದ್ಯ ಡಾ. ಪಿ.ವಿ. ಭಂಡಾರಿ ಉಪಸ್ಥಿತರಿದ್ದು, ವಿಸ್ತಾರವಾಗಿ ಈ ಹೊಂಡದಿಂದಾಗಬಹುದಾದ ಅಪಾಯಗಳನ್ನು ಸಾರ್ವಜವಿಕರ ಮುಂದಿಟ್ಟರು.ಮೊದಲು ಗುಂಡಿಯೊಳಗೆ ಇಳಿದು ಅದನ್ನು ದಾಟುವ ಮೂಲಕ ಪ್ರತಿಭಟನೆ ನಡೆಸಲುದ್ದೇಶಿಸಿದ್ದ ನಿತ್ಯಾನಂದ ಅವರು, ಗುಂಡಿಯೊಳಗೆ ನಿರ್ಮಾಣ ಕಾಮಗಾರಿಗೆ ನೆಟ್ಟಿರುವ ಸರಳುಗಳಿರುವುದರಿಂದ, ಕ್ರೇನ್ ಮೂಲಕ ದಾಟುವ ಸಾಹಸ ಮಾಡಿದರು. ಅಪಾಯಕಾರಿ ಪ್ರತಿಭಟನೆಯಾದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದವರಿಗೂ ಮೊದಲೇ ಮಾಹಿತಿ ನೀಡಲಾಗಿತ್ತು. ಅದರಂತೆ ಅಗ್ನಿಶಾಮಕ ಸಿಬ್ಬಂದಿ, ಆಂಬುಲೆನ್ಸ್, ಮುಳುಗುತಜ್ಞರು, ಸಂಚಾರಿ ಪೊಲೀಸರು, ನಗರ ಠಾಣೆಯ ಪೋಲಿಸರು ಸ್ಥಳದಲ್ಲಿ ಉಪಸ್ಥಿತರಿದ್ದರು.
* ನಗರಸಭೆಯೇ ಹೊಣೆಆಸ್ಪತ್ರೆಯ ಗುತ್ತಿಗೆ ಪಡೆದಿದ್ದ ಖಾಸಗಿಯವರು ಆರ್ಥಿಕ ಮುಗ್ಗಟ್ಟಿನಿಂದ ಅದನ್ನು ಕೈಬಿಟ್ಟಿದ್ದಾರೆ. ಈಗ ಈ ಗುಂಡಿಯನ್ನು ಮುಚ್ಚುವ ಹೊಣೆ ನಗರಸಭೆ ಹೆಗಲೇರಿದೆ. ಈ ಬೃಹತ್ ಗುಂಡಿಯನ್ನು ಮುಚ್ಚುವುದಕ್ಕೆ ನೂರಾರು ಲೋಡು ಮಣ್ಣು ಅಗತ್ಯವಿದ್ದು, ಸುಮಾರು 18 ಲಕ್ಷ ರು.ವರೆಗೆ ವೆಚ್ಚ ತಗಲುತ್ತದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.