ಉಡುಪಿ: ಭಾವಿ ಪರ್ಯಾಯ ಶಿರೂರು ಮಠದ ಅಕ್ಕಿ ಮುಹೂರ್ತ ಸಂಪನ್ನ

KannadaprabhaNewsNetwork |  
Published : Mar 07, 2025, 12:47 AM IST
ಕೃಷ್ಣಮಠದ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಶಿರೂರು ಮಠಕ್ಕೆ ಆಗಮಿಸಿ ಅಕ್ಕಿ ಮುಹೂರ್ತದಲ್ಲಿ ಭಾಗವಹಿಸಿ, ಸಂಪ್ರದಾಯಿಕ  ಗೌರವವನ್ನು ಸ್ವೀಕರಿಸಿ, ಆಶೀರ್ವಚನ ನೀಡಿದರು.ಕೃಷ್ಣಮಠದ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಶಿರೂರು ಮಠಕ್ಕೆ ಆಗಮಿಸಿ ಅಕ್ಕಿ ಮುಹೂರ್ತದಲ್ಲಿ ಭಾಗವಹಿಸಿ, ಸಂಪ್ರದಾಯಿಕ  ಗೌರವವನ್ನು ಸ್ವೀಕರಿಸಿ, ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

2026ರ ಜ.18ರಂದು ನಡೆಯುವ ಪರ್ಯಾಯೋತ್ಸವದಲ್ಲಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರವನ್ನು ಪ್ರಥಮ ಬಾರಿಗೆ ಸ್ವೀಕರಿಸಲಿದ್ದಾರೆ. ಸಂಪ್ರದಾಯದಂತೆ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ 4 ಮುಹೂರ್ತಗಳು ನಡೆಯುತ್ತವೆ. ಅದರಂತೆ 2ನೇ ಮುಹೂರ್ತ ಅಕ್ಕಿ ಮುಹೂರ್ತ ಗುರುವಾರ ಸಂಪನ್ನಗೊಂಡಿತು.

2026ರ ಜ.18ರಂದು ಪರ್ಯಾಯೋತ್ಸವ । ಅಷ್ಟ ಮಠಾಧೀಶರು ಭಾಗಿ

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಕೃಷ್ಣಮಠದ ಭಾವಿ ಪರ್ಯಾಯ ಶಿರೂರು ಮಠದಲ್ಲಿ ಗುರುವಾರ ಸಾಂಪ್ರದಾಯಿಕ ಅಕ್ಕಿ ಮುಹೂರ್ತ ವೈಭವದಿಂದ ನಡೆಯಿತು. ಅಷ್ಟ ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.2026ರ ಜ.18ರಂದು ನಡೆಯುವ ಪರ್ಯಾಯೋತ್ಸವದಲ್ಲಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರವನ್ನು ಪ್ರಥಮ ಬಾರಿಗೆ ಸ್ವೀಕರಿಸಲಿದ್ದಾರೆ. ಸಂಪ್ರದಾಯದಂತೆ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ 4 ಮುಹೂರ್ತಗಳು ನಡೆಯುತ್ತವೆ. ಅದರಂತೆ 2ನೇ ಮುಹೂರ್ತ ಅಕ್ಕಿ ಮುಹೂರ್ತ ಗುರುವಾರ ಸಂಪನ್ನಗೊಂಡಿತು.ಬೆಳಗ್ಗೆ 6 ಗಂಟೆಗೆ ಶಿರೂರು ಮಠದಲ್ಲಿ ಆರಾಧ್ಯ ಶ್ರೀ ವಿಠಲ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ರಥಬೀದಿಯಲ್ಲಿರುವ ಚಂದ್ರಮೌಳೀಶ್ವರ- ಅನಂತೇಶ್ವರ ದೇವಾಲಯಗಳಲ್ಲಿ, ಕೃಷ್ಣಮಠದಲ್ಲಿ ಶ್ರೀ ಕೃಷ್ಣ- ಮುಖ್ಯಪ್ರಾಣ ದೇವರಲ್ಲಿ, ಮಧ್ವಾಚಾರ್ಯರ ಸಾನ್ನಿಧ್ಯ, ಬೃಂದಾವನಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಬಳಿಕ ಅಷ್ಟಮಠಗಳಿಗೆ ತೆರಳಿ ಇತರ ಮಠಾಧೀಶರನ್ನು ಅವರ ಪಟ್ಟದ ದೇವರ ಸಹಿತ ಅಕ್ಕಿ ಮುಹೂರ್ತಕ್ಕೆ ಬರ ಮಾಡಿಕೊಳ್ಳಲಾಯಿತು. ಶಿರೂರು ಮಠದಲ್ಲಿ ಎಲ್ಲ ಮಠಾಧೀಶರೂ ತಮ್ಮ ಪಟ್ಟದ ದೇವರು ಮತ್ತು ವಿಠಲ ದೇವರಿಗೆ ಆರತಿ ಬೆಳಗಿದರು.ನಂತರ ಸಂಸ್ಕೃತ ಕಾಲೇಜು ವೃತ್ತದಿಂದ ಅಕ್ಕಿಮುಡಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟು, ಮಂಗಳವಾದ್ಯ, ಬಿರುದಾವಳಿ ಸಹಿತ ವೈಭವದ ಮೆರವಣಿಗೆಯಲ್ಲಿ ರಥ ಬೀದಿಗೆ ತರಲಾಯಿತು. ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿ, ರಥಬೀದಿಗೆ ಪ್ರದಕ್ಷಿಣೆ ಮಾಡಿ, ತಲೆಹೊರೆಯ ಮೂಲಕ ನೂರಾರು ಅಕ್ಕಿ ಮುಡಿಗಳನ್ನು ಶಿರೂರು ಮಠಕ್ಕೆ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.ಎಲ್ಲ ಮಠಾಧೀಶರು ಬೊಗಸೆ ಅಕ್ಕಿ ಬೃಹತ್ ಪಾತ್ರೆಗೆ ಹಾಕುವ ಮೂಲಕ ಅಕ್ಕಿಯನ್ನು ಸಂಗ್ರಹಿಸುವ ಅಕ್ಕಿ ಮುಹೂರ್ತಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಮಠದ ಗಣ್ಯ ಭಕ್ತರು ಕೂಡ ಇದರಲ್ಲಿ ಕೈಜೋಡಿಸಿದರು.ಇದಾದ ಬಳಿಕ ಎಲ್ಲ ಮಠಾಧೀಶರಿಗೆ ಶಿರೂರು ಮಠದ ಪರವಾಗಿ ಮಾಲಿಕ ಮಂಗಳಾರತಿ, ಗಂಧೋಪಚಾರ, ಗೌರವಗಳನ್ನು ಸಲ್ಲಿಸಲಾಯಿತು. ಶ್ರೀಗಳೆಲ್ಲರೂ ಆಶೀರ್ವಚನ ನೀಡಿ, ಭಾವಿ ಪರ್ಯಾಯೋತ್ಸವಕ್ಕೆ ಶುಭ ಪ್ರಾರ್ಥಿಸಿದರು.

ಈ ಎಲ್ಲ ಕಾರ್ಯಕ್ರಮಗಳ ನೇತೃತ್ವವನ್ನು ಶಿರೂರು ಮಠದ ದಿವಾಣರಾದ ಡಾ. ಉದಯ ಸರಳತ್ತಾಯ ವಹಿಸಿದ್ದರು. ಮಠದ ಪಾರಪತ್ಯೆಗಾರರಾದ ಶ್ರೀಶ ಭಟ್‌ ಕಡೆಕಾರ್‌, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಇತರ ಗಣ್ಯರಾದ ಪ್ರದೀಪ್‌ ಕುಮಾರ್ ಕಲ್ಕೂರ, ಡಾ. ಕೃಷ್ಣಪ್ರಪಸಾದ್, ಡಾ. ತಲ್ಲೂರು ಶಿವರಾಮ ಶೆಟ್ಟಿ, ಉದಯಕುಮಾರ್ ಶೆಟ್ಟಿ ಮುನಿಯಾಲು, ಮಟ್ಟಾರ್ ರತ್ನಾಕರ ಹೆಗ್ಡೆ, ರಮೇಶ್‌ ಕಾಂಚನ್‌, ಜಯಕರ ಶೆಟ್ಟಿ ಇಂದ್ರಾಳಿ, ಮಂಜುನಾಥ ಉಪಾಧ್ಯಾಯ, ಕೆ. ಕೃಷ್ಣಮೂರ್ತಿ ಆಚಾರ್ಯ ಮುಂತಾದವರು ಭಾಗವಹಿಸಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...