ಉಡುಪಿ: ಇಲ್ಲಿನ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ. 16ರಿಂದ 20ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ವೈಭವ- 2026 ಅದ್ದೂರಿಯಾಗಿ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮನೆ ಮನೆಗೆ ಕಾಣಿಕೆ ಡಬ್ಬಿ, ಆಮಂತ್ರಣ ಪತ್ರಿಕೆ ಹಾಗೂ ಪ್ರಚಾರದ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮ ನಡೆಯಿತು
ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ 200ಕ್ಕೂ ಅಧಿಕ ವಾಹನಗಳಲ್ಲಿ ಅದ್ಧೂರಿ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಬ್ರಹ್ಮಕಲಶೋತ್ಸವದಂದು 20 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯುತ್ತದೆ ಎಂದರು.
ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಈ ಶ್ರೀ ಮಹಾಲಿಂಗೇಶ್ವರ ದೇವಳ ಮಾಗಣೆಗೆ ಸಂಬಂಧಿಸಿದ್ದು, ಪ್ರಾಚೀನ ಮತ್ತು ಪುರಾಣ ಪ್ರಸಿದ್ಧವಾಗಿರುವ ದೇವಸ್ಥಾನವಾಗಿದೆ, ಈ ಕಾರ್ಯಕ್ರಮದಲ್ಲಿ ಊರವರೆಲ್ಲರೂ ಕೈಜೋಡಿಸಬೇಕು ಎಂದರು. ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಕೆ. ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, ಸಂಸ್ಕಾರ, ಸಂಸ್ಕೃತಿಯ ಪ್ರತೀಕವಾಗಿರುವ ದೇಗುಲದಲ್ಲಿ ನಡೆಯುವ ದೇವತಾ ಕಾರ್ಯದಲ್ಲಿ ಭಾಗಿಯಾಗುವುದು ನಮ್ಮೆಲ್ಲರ ಪೂರ್ವ ಜನ್ಮದ ಪುಣ್ಯಫಲವಾಗಿದೆ. ಕನ್ನರ್ಪಾಡಿ ದೇವಳದಿಂದ ಊರಿನ ಸಮಸ್ತರ ಸಹಕಾರದೊಂದಿಗೆ ಈ ಬ್ರಹ್ಮಕಲಶೋತ್ಸವಕ್ಕೆ ಅದ್ದೂರಿ ಹೊರೆಕಾಣಿಕೆಯನ್ನು ಸಮರ್ಪಣೆ ಮಾಡಲಾಗುವುದು ಎಂದರು.ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ಉದ್ಯಮಿ ಪ್ರಭಾಕರ್ ಪೂಜಾರಿ, ನಗರಸಭೆ ಮಾಜಿ ಸದಸ್ಯ ಟಿ.ಜಿ. ಹೆಗ್ಡೆ ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಬನ್ನಂಜೆ ಸ್ವಾಗತಿಸಿದರು. ಕೃತಿ ಮೂಡುಬೆಟ್ಟು ನಿರೂಪಿಸಿದರು.