ಉಡುಪಿ: ತಮಗೆ ಕನಿಷ್ಠ ಕೂಲಿ ಮತ್ತು ತುಟ್ಟಿ ಭತ್ಯೆ ನಿರಾಕರಿಸಿದ ಬೀಡಿ ಮಾಲಕರ ವಿರುದ್ಧ ಉಡುಪಿ ಜಿಲ್ಲೆಯ ಬೀಡಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ, ಹಗಲುರಾತ್ರಿ ಧರಣಿ ಸತ್ಯಾಗ್ರಹವನ್ನು ಮಂಗಳವಾರದಿಂದ ಆರಂಭಿಸಿದ್ದಾರೆ.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುರೇಶ ಕಲ್ಲಾಗರ ಮಾತನಾಡಿ, ಬೀಡಿ ಮಾಲಕರು ಸರ್ಕಾರ ಮತ್ತು ಕಾನೂನಿಗಿಂತ ದೊಡ್ಡ ವ್ಯಕ್ತಿಗಳಾಗಿ ದ್ದರಿಂದಲೇ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಕರಾವಳಿ ಜಿಲ್ಲೆಗಳ ಶಾಸಕರು, ಜಿಲ್ಲಾಡಳಿತ ಬಡ ಬೀಡಿ ಕಾರ್ಮಿಕರ ಪರವಾಗಿ ನಿಲ್ಲದೇ ಮಾಲಿಕರ ಜೊತೆ ನಿಂತಿರುವುದರಿಂದಲೇ ಕಾರ್ಮಿಕರ ಬೆವರಿನ ಪಾಲಿನ ಕೂಲಿ ನಾಚಿಕೆಯಿಲ್ಲದೇ ಬಾಕಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಬೀಡಿ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ., ಉಪಾಧ್ಯಕ್ಷ ಕೆ ಶಂಕರ್,ಬೀಡಿ ಸಂಘಟನೆಯ ಮುಖಂಡರಾದ ಉಮೇಶ್ ಕುಂದರ್, ಬಲ್ಕೀಸ್ ಭಾನು, ನಳಿನಿ, ಸುನೀತಾ ಕಾರ್ಕಳ,ಮೋಹನ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ನಾಗರತ್ನ ನಾಡ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ಮೊದಲಾದವರಿದ್ದರು.