ಉಡುಪಿ: ಮೈಕಲ್ ಡಿಸೋಜಾ ಚಾರಿಟೀಸ್ ಮತ್ತು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ನಡುವೆ ಬಡವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮುಂದಿನ ಐದು ವರ್ಷಗಳ ಒಪ್ಪಂದಕ್ಕೆ ಗುರುವಾರ ಉಡುಪಿ ಕ್ರೈಸ್ತ ಧರ್ಮಾಧ್ಯಕ್ಷರ ನಿವಾಸದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಬಡವರ ಕಣ್ಣೀರು ಒರೆಸುವ ಕಾಯಕ: ಈ ವೇಳೆ ಮಾತನಾಡಿದ ಧರ್ಮಾಧ್ಯಕ್ಷರು, ಬಡವರ ಅಶಕ್ತರ ಕಣ್ಣೀರು ಒರೆಸುವ ಕಾಯಕದಲ್ಲಿ ಉಡುಪಿ ಧರ್ಮಪ್ರಾಂತ್ಯ ಕಳೆದ 15 ವರ್ಷಗಳಿಂದ ನಿರಂತರ ನಿರತವಾಗಿದೆ. ಈ ಕಾಯಕಕ್ಕೆ ಈಗ ಉದ್ಯಮಿ ಕೊಡುಗೈ ದಾನಿ ಮೈಕಲ್ ಡಿಸೋಜಾ ಕೈಜೋಡಿಸಿದ್ದು, ಇದು ಮತ್ತಷ್ಟು ಸೇವೆ ನೀಡಲು ಸಾಧ್ಯವಾಗಲಿದೆ. ಕಳೆದ 15 ವರ್ಷಗಳಲ್ಲಿ ಶಿಕ್ಷಣ, ಬಡವರಿಗೆ ಮನೆ ನಿರ್ಮಾಣ ಸೇರಿದಂತೆ ಹಲವಾರ ಯೋಜನೆಗಳಿಗೆ ಎಂ.ಡಿಎಸ್ ಚಾರಿಟೀಸ್ ಸುಮಾರು 13 ಕೋಟಿ ರು.ಗೂ ಅಧಿಕ ಮೊತ್ತವನ್ನು ವ್ಯಯಿಸಿದೆ ಎಂದರು.
ಚಾರಿಟೀಸ್ ಮುಖ್ಯಸ್ಥ ಮೈಕಲ್ ಡಿಸೋಜಾ ಮಾತನಾಡಿ ಹೆತ್ತತಾಯಿ, ಹುಟ್ಟಿದ ಊರು ಮತ್ತು ಮಾತೃ ಭಾಷೆಯನ್ನು ಎಂದಿಗೂ ಮರೆಯಬಾರದು. ಈ ನಿಟ್ಟಿನಲ್ಲಿ ಸಮುದಾಯದ ಅಶಕ್ತರನ್ನು ಮೇಲೆತ್ತುವ ಕಾಯಕ ಮಾಡುವುದು ತನಗೆ ಹಾಗೂ ಕುಟುಂಬಕ್ಕೆ ಸಮಾಧಾನ ಮತ್ತು ನೆಮ್ಮದಿಯನ್ನು ನೀಡಿದೆ. ಸಮುದಾಯದ ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಏರಬೇಕು, ಅದಕ್ಕೆ ಧರ್ಮಪ್ರಾಂತ್ಯದೊಂದಿಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ಹೇಳಿದರು.ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಕಳೆದ 15 ವರ್ಷಗಳಲ್ಲಿ ಎಂ.ಡಿಎಸ್ ಚಾರಿಟೀಸ್ ಮೂಲಕ ಧರ್ಮಪ್ರಾಂತ್ಯದ ಎಡ್ಯುಕೇರ್ ಶೈಕ್ಷಣಿಕ ಸಹಾಯ, ಮನೆ ನಿರ್ಮಾಣಕ್ಕೆ ಅನುದಾನ, ಮೂರನೇ ಮಗುವಿಗೆ ವಿದ್ಯಾರ್ಥಿ ವೇತನ ಇತ್ಯಾದಿಗಳ ಸಚಿತ್ರ ಮಾಹಿತಿ ನೀಡಿದರು.