ಕನ್ನಡಪ್ರಭ ವಾರ್ತೆ ಉಡುಪಿನಗರದ ಯುನೈಟೆಟ್ ಬಾಸೆಲ್ ಮಿಷನ್ ಜುಬ್ಲಿ ಚರ್ಚ್ ಹಾಲ್‌ನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇದರ 1999ರ ಪ್ರಥಮ ತಂಡದ ಸಿಬ್ಬಂದಿಯ ರಜತ ಸಂಭ್ರಮವನ್ನು ಸಿಐಡಿಯ ಡಿಜಿಪಿ ಡಾ. ಎಂ.ಎ. ಸಲಿಂ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಆರಂಭದಿಂದಲೂ ಇಲ್ಲಿ ವರೆಗೆ ಉಡುಪಿ ಜಿಲ್ಲೆ ಶಾಂತಿ ಸುವ್ಯವಸ್ಥೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ಇದಕ್ಕೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯ ಪ್ರಾಮಾಣಿಕ ಸೇವೆಯೇ ಕಾರಣ ಎಂದರು.ಪೊಲೀಸ್ ವ್ಯವಸ್ಥೆಯಲ್ಲಿ ಇಂದು ವಿಶೇಷ ಬದಲಾವಣೆಗಳಾಗಿದ್ದು, ಅದಕ್ಕೆ ತಕ್ಕಂತೆ ನಮ್ಮ ಕಾರ್ಯವೈಖರಿ ಕೂಡ ಬದಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ಜಿಲ್ಲಾ ಪೊಲೀಸ್ ಜೊತೆಯಲ್ಲಿ ಕರಾವಳಿ ಕಾವಲು ಪಡೆ ಹಾಗೂ ನಕ್ಸಲ್ ನಿಗ್ರಹ ದಳ ಕಾರ್ಯಾಚರಿಸುತ್ತಿದೆ. ಇದರಿಂದಾಗಿ ಸಾರ್ವಜನಿಕರೊಂದಿಗೆ ಪೊಲೀಸರು ಹೆಚ್ಚು ನಿಕಟವಾದ ಸಂಪರ್ಕ ಹೊಂದಲು ಸಾಧ್ಯವಾಗಿದೆ. ಸಂಘಟಿತವಾದ ಪೊಲೀಸ್ ವ್ಯವಸ್ಥೆಗೆ ಉಡುಪಿ ಪೂರಕ ಜಿಲ್ಲೆಯಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯತೆ ಇದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಎಸ್ಪಿ ಡಾ. ಅರುಣ್ ಕೆ. ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ವಿಶೇಷ ಮಕ್ಕಳ ಆಸರೆ ಸಂಸ್ಥೆಯ ಜೈ ವಿಠಲ್, ತರಬೇತಿ ನಿರತ ಐಪಿಎಸ್ ಅಧಿಕಾರಿ ಹರ್ಷ ಪ್ರಿಯಂವಧ, ವಾಸ್ತು ತಂತ್ರಜ್ಞ ಸೈಮನ್, ಡಿಎಆರ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.1999ರ ಬ್ಯಾಚಿನ ಪೊಲೀಸ್ ಶಿವು ಪ್ರಾರ್ಥಿಸಿದರು. ವಿರೇಂದ್ರ ಶೆಟ್ಟಿ ಸ್ವಾಗತಿಸಿದರು. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಕರ ಎರ್ಮಾಳ್ ವಂದಿಸಿದರು.1999ರ ತಂಡಕ್ಕೆ ತರಬೇತಿ ನೀಡಿದ ಇಲಾಖೆಯ ಗುರುಗಳಿಗೆ ಸಿಬ್ಬಂದಿಯಿಂದ ಗುರುವಂದನೆ ನಡೆಯಿತು. 1999ರ ಬ್ಯಾಚ್‌ನ ಎಲ್ಲ ಸಿಬಂದಿಗೆ ರಜತ ಸಂಭ್ರಮದ ಪ್ರಯುಕ್ತ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ನಿಧನರಾದ ತಂಡದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸಭಾ ಕಾರ್ಯಕ್ರಮದ ಬಳಿಕ ಸಂಗೀತ ರಸಮಂಜರಿ, ನೃತ್ಯ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, 99ರ ಯಕ್ಷ ನೃತ್ಯ ವೈಭವ ಕಾರ್ಯಕ್ರಮ ಜರುಗಿತು. ಡಿಎಆರ್ ಸಿಬ್ಬಂದಿ ಯೋಗೇಶ ನಾಯ್ಕ ಮತ್ತು ಸ್ಟಾರ್ ಈವೆಂಟ್ಸ್‌ನ ಪ್ರವೀಣ ತೋನ್ಸೆ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು.