ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಸರಾಸರಿ 93 ಮಿ.ಮೀ. ಮಳೆ ದಾಖಲಾಗಿದೆ. ಮುಖ್ಯವಾಗಿ ಕುಂದಾಪುರ ತಾಲೂಕಿನಲ್ಲಿ 104 ಮಿ.ಮೀ.ನಷ್ಟು ಜಡಿಮಳೆಯಾಗಿದೆ. ಉಳಿದ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.
ಜಿಲ್ಲೆಯಲ್ಲಿ ಮಂಗಳವಾರದ ಮಳೆಗೆ 3 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು 3,50,000 ರು., ಸುಮಾರು 13 ಮನೆಗಳಿಗೆ 4,55,000 ರು., ಮತ್ತು 2 ಜಾನುವಾರ ಕೊಟ್ಟಿಗೆಗಳಿಗೆ ಭಾಗಶಃ ಹಾನಿಯಾಗಿದೆ. ಕುಂದಾಪುರ ತಾಲೂಕೊಂದರಲ್ಲಿಯೇ ಸುಮಾರು 19 ಕುಟುಂಬಗಳ ತೋಟ, ಬೆಳೆಗಳು ನಾಶವಾಗಿ ಸುಮಾರು 1.95 ಲಕ್ಷ ರು.ಗಳಷ್ಟು ನಷ್ಟ ಉಂಟಾಗಿದೆ.ಜಿಲ್ಲೆಯಲ್ಲಿ ಗಾಳಿಮಳೆಗೆ ಒಟ್ಟು 155 ವಿದ್ಯುತ್ ಕಂಬಗಳು ಧರೆಗುರುಳಿದ್ದು, 2.15 ಕಿ.ಮೀ. ಉದ್ದದ ವಿದ್ಯುತ್ ತಂತಿ ಮತ್ತು 6 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಇದರಿಂದ ಮೆಸ್ಕಾಂಗೆ ಅಂದಾಜು 25.42 ಲಕ್ಷ ರು. ನಷ್ಟವಾಗಿದೆ.
ಪಡುಬಿದ್ರಿಯ ನಡಿಪಟ್ಣ ಪ್ರದೇಶದಲ್ಲಿ ಕಡಲುಕೊರೆತ ಆರಂಭವಾಗಿದ್ದು, ಕಾಪು ತಹಸೀಲ್ದಾರ್ ಪ್ರತಿಭಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಡುಪಿಯ ಕುತ್ಪಾಡಿ ಕಟ್ಟೆಗುಡ್ಡೆಯಲ್ಲಿ ಮನೆಗಳಿಗೆ ಉಂಟಾಗಿರುವ ಹಾನಿ ಪ್ರದೇಶಕ್ಕೆ ಉಡುಪಿ ಶಾಸಕರಾದ ಯಶ್‌ಪಾಲ್ ಸುವರ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದರು.
ಕುಂದಾಪುರ ತಾಲೂಕಿನಲ್ಲಿ 3 ಮನೆಗಳಿಗೆ 1.40 ಲಕ್ಷ ರು., ಬೈಂದೂರು ತಾಲೂಕಿನಲ್ಲಿ 4 ಮನೆಗಳಿಗೆ 1.95 ಲಕ್ಷ ರು., ಉಡುಪಿ ತಾಲೂಕಿನಲ್ಲಿ 5 ಮನೆಗಳಿಗೆ 2.65 ಲಕ್ಷ ರು., ಕಾಪು ತಾಲೂಕಿನ 2 ಮನೆಗಳಿಗೆ 1.15 ಲಕ್ಷ ರು. ಮತ್ತು ಕಾರ್ಕಳ ತಾಲೂಕಿನ 2 ಮನೆಗಳಿಗೆ 80 ಸಾವಿರ ರು.ಗಳಷ್ಟು ಹಾನಿ ಸಂಭವಿಸಿದೆ.