ಉಡುಪಿ ಜಿಲ್ಲಾ ಗಣರಾಜ್ಯೋತ್ಸವ: 13 ಕೃಷಿಕರಿಗೆ, ಸಾಧಕರಿಗೆ ಸನ್ಮಾನ

KannadaprabhaNewsNetwork | Published : Jan 28, 2025 12:50 AM

ಸಾರಾಂಶ

ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಕೃಷಿ ಇಲಾಖೆಯ ವತಿಯಿಂದ 2024-25ನೇ ಸಾಲಿನ ಜಿಲ್ಲಾಮಟ್ಟದ ಕೃಷಿ ಪ್ರಶಸ್ತಿ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರೈತರನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಭಾನುವಾರ ನಡೆದ ಉಡುಪಿ ಜಿಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಕೃಷಿ ಇಲಾಖೆಯ ವತಿಯಿಂದ 2024-25ನೇ ಸಾಲಿನ ಜಿಲ್ಲಾಮಟ್ಟದ ಕೃಷಿ ಪ್ರಶಸ್ತಿ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರೈತರನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸನ್ಮಾನಿಸಿದರು.

ಜಿಲ್ಲಾ ಕೃಷಿ ಪ್ರಶಸ್ತಿಯನ್ನು ಪ್ರಕಾಶ್ ಚಂದ್ರ, ಸೋಮ ಕುಲಾಲ್, ಆದಿತ್ಯ ಶೆಟ್ಟಿ, ಶರತ್ ಕುಮಾರ್, ಸ್ಟೀಫನ್ ಬಾಸಿಲ್, ನೇಮಿರಾಜ್, ಭಾಸ್ಕರ್ ಪೂಜಾರಿ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ತಿಮ್ಮಪ್ಪ, ವೆಲೇರಿಯನ್, ವನಜ ಪೂಜಾರಿ, ಬೇಬಿ ಶೆಡ್ತಿ, ಸ್ಮಿತಾ ನಾಯಕ್ ಹಾಗೂ ಗುಂಡು ಗಾಣಿಗ ಅವರಿಗೆ ನೀಡಿ ಸನ್ಮಾನಿಸಲಾಯಿತು.ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕಾಲೇಜು ವಿಭಾಗದಲ್ಲಿ ಕುಂಜಿಬೆಟ್ಟು ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಮತ್ತು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಎನ್‌ಸಿಸಿ ನೇವಿ ಪ್ರಥಮ, ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು ನೇವಿ ದ್ವಿತೀಯ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಎನ್‌ಸಿಸಿ ಆರ್ಮಿ ವಿಭಾಗ ತೃತೀಯ ಸ್ಥಾನ ಪಡೆಯಿತು.

ಪ್ರೌಢ ಶಾಲಾ ವಿಭಾಗದಲ್ಲಿ ಆವರ್ಸೆ ಸರ್ಕಾರಿ ಪ್ರೌಢಶಾಲೆ ಎನ್‌ಸಿಸಿ ವಿಭಾಗ ಪ್ರಥಮ, ಉಡುಪಿ ಸೈಂಟ್ ಸಿಸಿಲಿ ಪ್ರೌಢಶಾಲೆ (ಹುಡುಗಿಯರು) ದ್ವಿತೀಯ ಹಾಗೂ ಕಡಿಯಾಳಿಯ ಯು. ಕಮಲಾಭಾಯಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆಯಿತು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಂತೆಕಟ್ಟೆ ಕಳತ್ತೂರು ಸರ್ಕಾರಿ ಪ್ರಾಥಮಿಕ ಶಾಲೆ ಪ್ರಥಮ ಹಾಗೂ ಒಳಕಾಡು ಸರ್ಕಾರಿ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆಯಿತು.ದೇಶಭಕ್ತಿ ಕುರಿತಾದ ನೃತ್ಯ ಕಾರ್ಯಕ್ರಮದಲ್ಲಿ ಒಳಕಾಡು ಸ.ಹಿ.ಪ್ರಾ. ಶಾಲೆ ಪ್ರಥಮ, ಉಡುಪಿಯ ಸೈಂಟ್ ಮೇರೀಸ್ ದ್ವಿತೀಯ ಮತ್ತು ಉಡುಪಿಯ ಮುಕುಂದ ಕೃಪ ಹೈಸ್ಕೂಲ್ ಮತ್ತು ಉಡುಪಿಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಇಂಗ್ಲಿಷ್ ಮೀಡಿಯಂ ಶಾಲೆ ತೃತೀಯ ಸ್ಥಾನ ಪಡೆಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಜಿಲ್ಲಾಮಟ್ಟದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಕಾರ್ಕಳ ತಾಲೂಕು ಪ್ರಥಮ ಬಿ.ಇ ವಿದ್ಯಾರ್ಥಿನಿ ಶರಣ್ಯ ತಂತ್ರಿ ನಂದಳಿಕೆ ಹಾಗೂ ಉಡುಪಿ ಉದ್ಯೋದಯ ಪಬ್ಲಿಕ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ವಿಶ್ರುತ ಸಾಮಗ ಅವರನ್ನು ಗೌರವಿಸಲಾಯಿತು.

ಅದೇ ರೀತಿ ಕ್ರೀಡಾ ಕ್ಷೇತ್ರದಲ್ಲಿ ಉಡುಪಿ ತಾಲೂಕಿನ ದಿಶಾ ಯು.ಎ. ಹಾಗೂ ಟಿ.ಎ.ಪೈ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ವೈಷ್ಣವ್ ಎಲ್. ಉಪಾಧ್ಯ, ನಾವೀನ್ಯತೆ ಕ್ಷೇತ್ರದಲ್ಲಿ ಉಡುಪಿಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಮೂಲ್ಯ ಹೆಗ್ಡೆ ಹಾಗೂ ಬ್ರಹ್ಮಾವರ ತಾಲೂಕಿನ ಸರ್ಕಾರಿ ಹಿರಿಯ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಪ್ರತೀಕ್ಷಾ ಮತ್ತು ತಾರ್ಕಿಕ ಸಾಧನೆಗಳು ಕ್ಷೇತ್ರದಲ್ಲಿ ಉಡುಪಿಯ 9ನೇ ತರಗತಿಯ ವಿದ್ಯಾರ್ಥಿ ಜಿಶ ಜಿತೇಶ್ ಹಾಗೂ 9ನೇ ತರಗತಿ ವಿದ್ಯಾರ್ಥಿ ಎಸ್.ವಿ. ಹರಿಹರಸೂಧನ್ ಅವರನ್ನು ಸನ್ಮಾನಿಸಲಾಯಿತು.

Share this article