‘ಕನ್ನಡಪ್ರಭ’ ಜಿಲ್ಲಾ ವರದಿಗಾರ ಸುಭಾಶ್ಚಂದ್ರ ವಾಗ್ಳೆಗೆ ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರ
ಕನ್ನಡಪ್ರಭ ವಾರ್ತೆ ಉಡುಪಿಬಿಲ್ಲುಬಾಣ, ಖಡ್ಗ, ತೋಪುಗಳಿಂದಾಗದ ಕೆಲಸ ಪತ್ರಿಕೆಯಿಂದ ಸಾಧ್ಯವಾಗುತ್ತದೆ ಎಂಬ ಮಾತಿದೆ. ಪತ್ರಕರ್ತರು ಪ್ರಜಾಪ್ರಭುತ್ವದ ರಕ್ಷಕರು, ಅವರ ಜೊತೆ ವೈದ್ಯರ, ಲೆಕ್ಕಪರಿಶೋಧಕರು ಸಮಾಜಕ್ಕೆ ನೀಡುವ ಸೇವೆ ಅನನ್ಯ ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಹಯೋಗದಲ್ಲಿ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ, ಪತ್ರಿಕಾ ದಿನದಂಗವಾಗಿ ಗೌರವ ಪುರಸ್ಕಾರ 2025 ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಚಾಲಕ ವೃತ್ತಿ, ಕೂಲಿ ಕಾರ್ಮಿಕ, ವೈದ್ಯ, ಸರಕಾರಿ ನೌಕರ ಸಹಿತ ಯಾವುದೇ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಬದ್ಧತೆಯಿಂದ ದುಡಿವ ವ್ಯಕ್ತಿ ಆರೋಗ್ಯವಂತ ಸಮಾಜ ನಿರ್ಮಾಣದ ಜತೆಗೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗುತ್ತಾರೆ. ಸಂಘಸಂಸ್ಥೆಗಳು ನಾನಾ ಕ್ಷೇತ್ರದ ಸಾಧಕರನ್ನು ಗುರುತಿಸಿದಾಗ ಅವರು ಮತ್ತಷ್ಟು ಕಾರ್ಯನಿರ್ವಹಿಸಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.ಮಲಬಾರ್ ವೈದ್ಯ ಪುರಸ್ಕಾರವನ್ನು ಡಾ. ಅಶೋಕ್ ಕುಮಾರ್ ವೈ.ಜಿ., ಡಾ. ಛಾಯಾ ಲತಾ. ಮಲಬಾರ್ ವಿಶ್ವ ಲೆಕ್ಕ ಪರಿಶೋಧಕರ ಪುರಸ್ಕಾರವನ್ನು ಕೆ.ಸುರೇಂದ್ರ ನಾಯಕ್, ಪಿ.ಚಂದ್ರ ಮೋಹನ್ ಹಂದೆ, ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರವನ್ನು ‘ಕನ್ನಡಪ್ರಭ’ ಜಿಲ್ಲಾ ವರದಿಗಾರ ಸುಭಾಶ್ಚಂದ್ರ ಎಸ್.ವಾಗ್ಳೆ ಹಾಗೂ ನಜೀರ್ ಪೋಲ್ಯ ಅವರಿಗೆ ಪ್ರದಾನ ಮಾಡಲಾಯಿತು.
ಸನ್ಮಾನಿತರನ್ನು ರಂಜಿನಿ ವಸಂತ್, ಸಿದ್ಧಬಸಯ್ಯ ಚಿಕ್ಕಮಠ, ಉಮೇಶ್ ಆಚಾರ್ಯ, ವಿದ್ಯಾ ಸರಸ್ವತಿ, ಸುಮಿತ್ರಾ ಕೆರೆಮಠ ಪರಿಚಯಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ,ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆ ವ್ಯವಸ್ಥಾಪಕ ಹಫೀಜ್ ರೆಹಮಾನ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಇದ್ದರು.ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ಗೌರವ ಪುರಸ್ಕಾರ ಸಮಿತಿಯ ಸಂಚಾಲಕ ವಿಘ್ನೇಶ್ವರ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಜೋಶಿ ವಂದಿಸಿದರು.