ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತಾಂಗದಗಡಿಯ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯಲ್ಲಿ ತಾಲೀಮು ಶಿಕ್ಷಕರಾಗಿದ್ದ ದಿ. ಸುಬ್ರಹ್ಮಣ್ಯ (ಮಣಿ) ಸ್ಮರಣಾರ್ಥ ಪ್ರಪ್ರಥಮ ಬಾರಿಗೆ ಅವಿಭಜಿತ ಜಿಲ್ಲಾ ಮಟ್ಟದ ‘ತಾಲೀಮು ಗೊಬ್ಬುದ ಪಂಥ’ವನ್ನು ಫೆ. 20 ರಂದು ಆಯೋಜಿಸಲಾಗಿದೆ.ಈ ವ್ಯಾಯಾಮ ಶಾಲೆಯ ಸುವರ್ಣ ಮಹೋತ್ಸವ ಸಮಿತಿ ಹಾಗೂ ಸ್ಥಳೀಯ ತರುಣ ಕಲಾ ವೃಂದದ ವತಿಯಿಂದ ಇಲ್ಲಿನ ಶ್ರೀ ಆಂಜನೇಯ - ಗಣಪತಿ ದೇವರ ಪುನರ್ ಪ್ರತಿಷ್ಠಾಪನೆಯ ದಶಮ ವರ್ಧಂತಿ ಮತ್ತು ಸಂಸ್ಥೆಯ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯ ಬಗ್ಗೆ ಸಂಸ್ಥೆಯ ಗೌರವ ಸಲಹೆಗಾರ ಸದಾನಂದ್ ನಾಯಕ್ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.
ರೋಮಾಂಚನಗೊಳಿಸುವ ಮತ್ತು ಕಠಿಣ ತರಬೇತಿಯನ್ನು ಬಯಸುವ ದಂಡ, ಕತ್ತಿ, ಬೆಂಕಿಯೊಂದಿಗೆ ನಡೆಸುವ ತಾಲೀಮು ಸ್ಪರ್ಧೆ ಅಂದು ಸಂಜೆ 5.30ಕ್ಕೆ ಶ್ಯಾಂ ಕಮಲ್ ಮೈದಾನದಲ್ಲಿ ನಡೆಯಲಿದೆ. ಉಡುಪಿ - ದ.ಕ. ಜಿಲ್ಲೆಗಳ ಆಹ್ವಾನಿತ 10 ತಂಡಗಳು ಭಾಗವಹಿಸಲಿವೆ. ಇದರಲ್ಲಿ ವಿಜೇತ ತಂಡಗಳಿಗೆ ಕ್ರಮವಾಗಿ 44,444 ರು., 33,333 ರು. ಮತ್ತು 22,222 ರು. ನಗದು ಬಹುಮಾನ ನೀಡಲಾಗುತ್ತದೆ. ತೀರ್ಪುಗಾರರಾಗಿ ತುಳು ಜಾನಪದ ವಿದ್ವಾಂಸ ಕೆ.ಕೆ.ಪೇಜಾವರ ಮಂಗಳೂರು, ಹಿರಿಯ ತಾಲೀಮು ಶಿಕ್ಷಕ ನವೀನ್ ಕುಮಾರ್ ಮಂಗಳೂರು ಮತ್ತು ಹಿರಿಯ ತಾಲೀಮು ಪಟು ಪಿ.ರಾಜ ಶೆಟ್ಟಿ ಉಡುಪಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.ಪಂದ್ಯಾಕೂಟವನ್ನು ವಜ್ರದೇಹಿ ಮಠದ ಶ್ರೀ ರಾಜಾಶೇಖರಾನಂದ ಸ್ವಾಮೀಜಿ ಉದ್ಘಾಟಿಸಲಿದ್ದು, ಉಡುಪಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರು, ಶಿರೂರು ಶ್ರೀ ವೇದವರ್ಧನ ತೀರ್ಥರು ಅನುಗ್ರಹ ಸಂದೇಶ ನೀಡಲಿದ್ದಾರೆ. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ ವಿಜಯ್ ಬಲ್ಲಾಳ್, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ ಈ ವ್ಯಾಯಾಮ ಶಾಲೆಯನ್ನು ಮನ್ನಡೆಸಿದ್ದ ದಿ.ಟಿ.ಕೃಷ್ಣಪ್ಪ ಅವರ ಪುತ್ಥಳಿಯನ್ನು ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ ಅನಾವರಣಗೊಳಿಸಲಿದ್ದಾರೆ ಎಂದರು.
22ರಂದು ಬೆಳಗ್ಗೆ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಕ್ಕೆ ದಿ.ಟಿ.ಕೃಷ್ಣಪ್ಪ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ರಂಜನ್ ಕೆ., ಸಮಾಜ ಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ, ನಗರಸಭಾ ಸದಸ್ಯ ಸಂತೋಷ್ ಜತ್ತನ್ ಭಾಗವಹಿಸಲಿದ್ದಾರೆ. ಎಂದರು.ಅಂದು ಸಂಜೆ 8.30 ಕ್ಕೆ ಸ್ಥಳೀಯರಿಂದ ನೃತ್ಯ ಕಾರ್ಯಕ್ರಮ, ನಂತರ ತುಳು ಹಾಸ್ಯಮಯ ‘ಅಂಚನೆ ಆವೋಡು’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮನೋಜ್ ಕುಮಾರ್, ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ ಗುಂಡಿಬೈಲು, ಕಾರ್ಯಕ್ರಮ ಸಂಯೋಜಕರಾದ ಶಿತಿಲ್ ಆರ್.ಪೂಜಾರಿ, ರಾಹುಲ್ ಆಮೀನ್, ಸಲಹೆಗಾರರಾದ ಗೌರಿಶಂಕರ್ ಉಪಸ್ಥಿತರಿದ್ದರು.