ಕನ್ನಡಪ್ರಭ ವಾರ್ತೆ ಉಡುಪಿ
ಧರ್ಮಪ್ರಾಂತ್ಯದ ಪ್ರಧಾನ ದೇವಾಲಯ ಮಿಲಾಗ್ರಿಸ್ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿ ನೆರವೇರಿಸಿದರು.
ನಂತರ ಸಂದೇಶ ನೀಡುತ್ತಾ, ಶುಭ ಶುಕ್ರವಾರ ಯೇಸು ಇಡೀ ಮನುಕುಲದ ವಿಮೋಚನೆಗಾಗಿ ತನ್ನಾತ್ಮವನ್ನು ಪಿತನ ಕೈಗೊಪ್ಪಿಸಿದ ದಿನ. ಕ್ರಿಸ್ತನ ತ್ಯಾಗದ ಮಹತ್ವವನ್ನು ಧ್ಯಾನಿಸುವ ಪವಿತ್ರ ದಿನ. ಶುಭ ಶುಕ್ರವಾರ ನಿಮ್ಮ ಬದುಕಿನಲ್ಲಿ ಪ್ರೀತಿಯ, ಕ್ಷಮೆಯ ಮತ್ತು ತ್ಯಾಗದ ಅರ್ಥವನ್ನು ಅರಿಯಲು ಸಹಾಯ ಮಾಡುತ್ತದೆ ಎಂದರು.ಇಂದಿನ ವೈಷಮ್ಯದಿಂದ ಕೂಡಿದ ಜಗತ್ತಿನಲ್ಲಿ ಕ್ರಿಸ್ತನ ಬಲಿದಾನವು ನಮಗೆ ಸಹಾನುಭೂತಿ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳೆಡೆಗೆ ಮನವನ್ನು ಕೊಂಡೊಯ್ಯುತ್ತದೆ. ಕ್ರಿಸ್ತನ ತ್ಯಾಗ, ನಮ್ಮ ಜೀವನದಲ್ಲಿ ದಾರಿ ತೋರಿಸುವ ಬೆಳಕಾಗಲಿ. ಪ್ರೀತಿ, ಕ್ಷಮೆ, ಪರೋಪಕಾರದ ಮೂಲಕ ನವ ಸಮಾಜವನ್ನು ಕಟ್ಟೋಣ. ಒಬ್ಬರೊಗೊಬ್ಬರು ಪ್ರೀತಿ ನೀಡುವ, ವೈರಿಗಳಿಗೆ ಕ್ಷಮೆ ನೀಡುವ, ಮತ್ತು ನೋವಿನ ಸಡುವೆಯೂ ಶಾಂತಿಯನ್ನು ಕಟ್ಟುವ ಸಂಕಲ್ಪದೊಂದಿಗೆ ಜೀವಿಸೋಣ ಎಂದು ಕರೆ ನೀಡಿದರು.
ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ಕ್ರೈಸ್ತರು ಉಪವಾಸ, ಧ್ಯಾನ, ಪ್ರಾರ್ಥನೆ ಸಲ್ಲಿಸಿದರು. ಕೆಲವು ಚರ್ಚ್‌ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತರಲಾಯಿತು. ತ್ಯಾಗದ ಉಳಿಕೆಯ ಹಣವನ್ನು ಬಡವರಿಗೆ ಹಂಚಲಾಯಿತು.