ಉಡುಪಿ: ಜುಲೈ 27ರ ವರೆಗೆ ಭಾರಿ ಮಳೆ, ಗಾಳಿ ಮುನ್ಸೂಚನೆ

KannadaprabhaNewsNetwork |  
Published : Jul 22, 2025, 12:01 AM IST
32 | Kannada Prabha

ಸಾರಾಂಶ

ಜು. 27ರ ವರೆಗೆ ಕರಾವಳಿಯಲ್ಲಿ ಭಾರಿ ಮಳೆ, ಗಾಳಿಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು, ಮೀನುಗಾರರು ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ, ವಿಪತ್ತು ನಿರ್ವಹಣಾ ಸಮಿತಿಯಲ್ಲಿರುವ ಅಧಿಕಾರಿಗಳು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತೀಯ ಹವಾಮಾನ ಇಲಾಖೆ ಜು. 27ರ ವರೆಗೆ ಕರಾವಳಿಯಲ್ಲಿ ಭಾರಿ ಮಳೆ, ಗಾಳಿಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು, ಮೀನುಗಾರರು ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ, ವಿಪತ್ತು ನಿರ್ವಹಣಾ ಸಮಿತಿಯಲ್ಲಿರುವ ಅಧಿಕಾರಿಗಳು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಈ ಅವಧಿಯಲ್ಲಿ ಸಮುದ್ರದಲ್ಲಿ ಗಂಟೆಗೆ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಸಮುದ್ರ, ನದಿ ತೀರದ ಮತ್ತು ತಗ್ಗುಪ್ರದೇಶದ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.ಮನೆ ಸಂಪೂರ್ಣ ನಾಶ:

ಕೆಲವು ದಿನಗಳಿಂದ ಬಿಡದೆ ಜಿಲ್ಲೆಯಾದ್ಯಂತ ಉತ್ತಮ ಮಳ‍ೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 68 ಮಿ.ಮೀ. ಮಳೆಯಾಗಿದೆ. ಇದರಿಂದ ಒಂದು ಮನೆ ಸಂಪೂರ್ಣ ನಾಶವಗಿದ್ದು ಮತ್ತು 5 ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ.

ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ರಾಘವೇಂದ್ರ ಜೋಗಿ ಅವರ ಮನೆ ಮಳೆಯಿಂದ ಸಂಪೂರ್ಣ ಕುಸಿದಿದ್ದು ಅವರಿಗೆ ಸುಮಾರು 10 ಲಕ್ಷ ರು. ನಷ್ಟ ಸಂಭವಿಸಿದೆ. ಗಂಗೊಳ್ಳಿ ಗ್ರಾಮದ ರೇಖಾ ಖಾರ್ವಿ ಮನೆಗೆ ಗಾಳಿ, ಮಳೆಯಿಂದ 2,50,000 ರು., ಕಾಪು ತಾಲೂಕಿನ ನಡ್ಸಾಲು ಗ್ರಾಮದ ಸೂರ್ಯಪ್ರಕಾಶ್ ಮನೆಗೆ ಮಳೆಯಿಂದ 1,00,000 ರು.ಗಳಷ್ಟು ನಷ್ಟವಾಗಿದೆ.

ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮಹಮದ್ ಜುಬೇರ್ ಅವರ ಮನೆ ಗೋಡೆ ಕುಸಿದು 15,000 ರು., ಹಾರ್ದಳ್ಳಿ ಮಂಡಳಿ ಗ್ರಾಮದ ಭಾರತಿ ಭುಜಂಗ ಶೆಟ್ಟಿ ಅವರ ಮನೆ ಮಳೆಯಿಂದ ಭಾಗಶಃ ಹಾನಿ 25,000 ರು. ಬೈಂದೂರು ತಾಲೂಕಿನ ಹೆರೂರು ಗ್ರಾಮದ ನೀಲು ಮೊಗವೀರ ಅವರ ಮನೆ ಗೋಡೆ 35,000 ರು., ಕಸಬಾ ನಿವಾಸಿ ರಾಧಾ ಬಿ. ಚಂದನ್ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು 30,000 ರು.ಗಳಷ್ಟು ನಷ್ಟವಾಗಿದೆ. ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಲಚ್ಚ ಅವರ ಮನೆಗೆ ಹೊಂದಿಕೊಂಡು ಇರುವ ದನದ ಕೊಟ್ಟಿಗೆ ಹಾನಿಯಾಗಿ 21,000 ರು. ನಷ್ಟವಾಗಿದೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ