ಕನ್ನಡಪ್ರಭ ವಾರ್ತೆ ಉಡುಪಿ
ಕೇರಳ ಸಮಾಜಂ ಉಡುಪಿ ಇದರ ಪ್ರಥಮ ಒಣಂ ಸಂಭ್ರಮಾಚರಣೆ ಭಾನುವಾರ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಅದ್ದೂರಿಯಾಗಿ ಜರುಗಿತು.ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ನ್ಯಾಯಾಧೀಶ ಕಿರಣ್ ಎಸ್ ಗಂಗಣ್ಣನವರ ಉದ್ಘಾಟಿಸಿ, ಕೇರಳಿಯರು ಇಂದು ತಮ್ಮ ಕಲೆ ಮತ್ತು ಸಂಸ್ಕೃತಿಯಿಂದಾಗಿ ಎಲ್ಲೆಲ್ಲೂ ಮನೆಮಾತಾಗಿದ್ದಾರೆ. ಓಣಂ ಹಬ್ಬ ಪ್ರತಿಯೊಬ್ಬರನ್ನು ಒಗ್ಗೂಡಿಸುವ ಹಬ್ಬವಾಗಿದ್ದು ಕೇರಳದ ವಿಶಾಲವಾದ ಸಂಸ್ಕೃತಿಯನ್ನು ಅದು ಪ್ರತಿಬಿಂಬಿಸುತ್ತದೆ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಕೇರಳಿಯರು ತಮ್ಮ ಶ್ರದ್ಧೆ ಮತ್ತು ಪರಿಶ್ರಮದಿಂದಾಗಿ ಎಲ್ಲೆಡೆ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ನಮ್ಮ ನೆರೆಯ ಕೇರಳ ರಾಜ್ಯ ಮತ್ತು ಕರಾವಳಿ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ಹೆಚ್ಚಿನ ಸಂಖ್ಯೆಯ ಕೇರಳಿಗರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ನೆಲೆ ನಿಂತು ಇಲ್ಲಿನ ಆರ್ಥಿಕ, ಸಾಮಾಜಿಕ ಪ್ರಗತಿಗೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ 2025 ನೇ ಸಾಲಿನ ಜಿಲ್ಲಾ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ ಪಡೆದ ಸರಸ್ವತಿ ಟೀಚರ್, ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದ ಬಿಬಿನ್ ಬಿಜೋಯ್, ಗಾಯನದಲ್ಲಿ ವಿಶೇಷ ಸಾಧನೆ ತೋರಿದ ವಿಷ್ಣು ನಂಬಿಯಾರ್ ಅವರನ್ನು ಗೌರವಿಸಲಾಯಿತು. ಎಸ್ಎಸ್‌ಎಲ್‌ಸಿ ಹಾಗೂ ದ್ವಿತಿಯ ಪಿಯುಸಿಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ, ಪೂಕಳಂ ಸ್ಪರ್ಧೆಯಲ್ಲಿ ವಿಜೇತರಿಗೆ ಪುರಸ್ಕಾರ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಸಮಾಜಂ ಉಡುಪಿ ಇದರ ಅಧ್ಯಕ್ಷರಾದ ಅರುಣ್ ಕುಮಾರ್ ವಹಿಸಿದ್ದರು. ಗೋವಾ ರಾಜ್ಯದ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಅವರ ಶುಭಾಂಶನಾ ವೀಡಿಯೋವನ್ನು ಪ್ರದರ್ಶಿಸಲಾಯಿತು. ಮಾಹೆಯ ಪ್ರಾಧ್ಯಾಪಕ ಡಾ. ಸಾಬೂ ಕೆ.ಎಂ. ಸುವರ್ಣ, ಖ್ಯಾತ ಸಿನೇಮಾ ತಾರೆಯರಾದ ವಿವೇಕ್ ಗೋಪನ್, ಸೀಮಾ ಜಿ. ನಾಯರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಆಚರಣಾ ಸಮಿತಿಯ ಸಂಚಾಲಕಿ ಪ್ರೋ. ಡಾ. ಬಿನ್ಸಿಂ ಎಂ. ಜಾರ್ಜ್ ಹಾಗೂ ಇತರರು ಉಪಸ್ಥಿತರಿದ್ದರು.ನಂತರ ಕ್ಯಾಲಿಕಟ್ ನ ವಿನೋದ್ ಕುಮಾರ್ ಮತ್ತವರ ತಂಡ ತಯಾರಿಸಿದ ಓಣಂ ಸದ್ಯ ಭೋಜನದ ಬಳಿಕ ಕೇರಳದ ಸಿನೆಮಾ ಕಲಾವಿದರ ತಂಡದಿಂದ ವೈವಿಧ್ಯಮಯ ಸಂಗೀತ, ನೃತ್ಯ, ಮಿಮಿಕ್ರಿ, ಹಾಸ್ಯಭರಿತ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಸಂಜೆ ಜಯಕೇರಳ ಕಳರಿ ಸಂಘಮ್ ತಂಡದಿಂದ ಕಳರಿ ಪ್ರದರ್ಶನ, ವಿಶೇಷವಾಗಿ ಹುಲಿವೇಷ ತಂಡದಿಂದ ಹುಲಿ ವೇಷ ಕುಣಿತ ಕೂಡ ನಡೆಯಿತು.