ಉಡುಪಿ: ಮಾ.1ರಂದು ಸಿವಿಎಲ್ ಎಂಜಿನಿಯರ್ಸ್ ಸಂಘಕ್ಕೆ ಚಾಲನೆ

KannadaprabhaNewsNetwork | Published : Feb 27, 2025 12:34 AM

ಸಾರಾಂಶ

ಉಡುಪಿ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ಸ್ಥಾಪಿಸಲಾಗಿದೆ. ಇದರ ಉದ್ಘಾಟನೆ, ಪದಗ್ರಹಣ ಸಮಾರಂಭ ಮತ್ತು ಲೋಗೊ ಅನಾವರಣ ಕಾರ್ಯಕ್ರಮ ಮಾ.1 ರಂದು ಸಂಜೆ 6.30 ಕ್ಕೆ ಕಿದಿಯೂರು ಹೊಟೇಲಿನ ಪವನ್ ರೂಫ್‌ಟಾಪ್‌ನಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಸಿವಿಲ್‌ ಎಂಜಿನಿಯರ್‌ಗಳು ಮತ್ತು ಸಾರ್ವಜನಿಕರು ಮನೆ - ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರ ಕಂಡು ಹಿಡಿಯುವ ಉದ್ದೇಶದಿಂದ ಉಡುಪಿ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ಸ್ಥಾಪಿಸಲಾಗಿದೆ. ಇದರ ಉದ್ಘಾಟನೆ, ಪದಗ್ರಹಣ ಸಮಾರಂಭ ಮತ್ತು ಲೋಗೊ ಅನಾವರಣ ಕಾರ್ಯಕ್ರಮ ಮಾ.1 ರಂದು ಸಂಜೆ 6.30 ಕ್ಕೆ ಕಿದಿಯೂರು ಹೊಟೇಲಿನ ಪವನ್ ರೂಫ್‌ಟಾಪ್‌ನಲ್ಲಿ ನಡೆಯಲಿದೆ ಎಂದು ನೂತನ ಸಂಘದ ನಿಯೋಜಿತ ಅಧ್ಯಕ್ಷ ಕೆ.ರಂಜನ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಕಾರ್ಯಕ್ರಮವನ್ನು ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ ಮೋಹನ್‌ರಾಜ್ ಕೆ.ಎಂ. ಸಂಘವನ್ನು ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ ಸಂಘದ ಲೋಗೊ ಅನಾವರಣಗೊಳಿಸುವರು. ಹಿರಿಯ ಇಂಜಿನಿಯರ್ ನೀಲಕಾಂತ್ ಎಂ. ಹೆಗ್ಡೆ ಪದಗ್ರಹಣ ನೆರವೇರಿಸಲಿದ್ದು, ಮಣಿಪಾಲ ಎಂಐಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಕಿರಣ್ ಕಾಮತ್‌ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು ಎಂದರು.

ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ರಂಗವು ಸ್ಥಳೀಯ ಪ್ರಾಧಿಕಾರಿಗಳ ಪರವಾನಗಿ, ನಿರಪೇಕ್ಷಣಾ ಪತ್ರ, ಸರ್ಕಾರದ ವಿವಿಧ ಕಾಯ್ದೆ, ನಿಯಮಗಳ ಹೇರಿಕೆ, ಮರಳು ಮತ್ತು ಕಲ್ಲಿನ ಪೂರೈಕೆಯಲ್ಲಿನ ಸಮಸ್ಯೆಯಿಂದ ತೀವ್ರ ತೊಂದರೆಗೊಗಾಗಿದೆ. ಕಂದಾಯ ಇಲಾಖೆಯ ಕೆಲವು ನೀತಿನಿಯಗಳಿಂದ ಸಾರ್ವಜನಿಕರಂತೂ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ನೂತನ ಸಂಘವು ಈ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಹರೀಶ್ ಕುಮಾರ್, ಕೋಶಾಧಿಕಾರಿ ಪಿ.ಲಕ್ಷ್ಮೀನಾರಾಯಣ ಉಪಾಧ್ಯ, ಉಪಾಧ್ಯಕ್ಷ ಗಣೇಶ್ ಬೈಲೂರು, ಮಾಧ್ಯಮ ಸಂಪರ್ಕಾಧಿಕಾರಿ ಮಹಾಬಲೇಶ್ವರ್ ಭಟ್ ಮತ್ತಿತರರಿದ್ದರು.

Share this article