ಉಡುಪಿ: ವಿಶೇಷಚೇತನ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ಗೌರವಧನ ಸಿಗುತ್ತಿಲ್ಲ ಎಂಬ ದೂರು ಬರುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಕ್ಷಕಿಯರಿಗೆ ಋತು ಚಕ್ರ ರಜೆ, ಹೆರಿಗೆ ರಜೆ ಸೌಲಭ್ಯ ಸೇರಿದಂತೆ ಮತ್ತಿತರ ನಿಯಮಾನುಸಾರ ಸಿಗುವ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಒತ್ತು ನೀಡಬೇಕು. ಸಿ.ಸಿ.ಟಿವಿ ಅಳವಡಿಸಬೇಕು. ಶೌಚಾಲಯಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದ ಅವರು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮಹಿಳೆಯರು ಹೋದಾಗ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ. ಜಿಲ್ಲೆಯಲ್ಲಿ ಕೆಲವು ಮಹಿಳೆಯರ ಮೇಲೆ ಎಫ್.ಐ.ಆರ್. ಆಗಿರುವುದು ಕಂಡು ಬಂದಿದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ಕೊರತೆಯಿಂದಾಗಿ ಕಳೆದ ಒಂದು ವರ್ಷದಿಂದ ಹೆರಿಗೆಗಾಗಿ ತಾಲೂಕು ಅಥವಾ ಜಿಲ್ಲೆಗೆ ಹೋಗುವ ಅನಿವಾರ್ಯತೆ ಉಂಟಾಗಿದೆ. ಕೂಡಲೇ ಹೆರಿಗೆ ತಜ್ಞರನ್ನು ನೇಮಕ ಮಾಡಬೇಕು ಎಂದರು. ಜಿಲ್ಲೆಯಲ್ಲಿ 345 ಸರ್ಕಾರಿ ಕಚೇರಿಗಳು ಹಾಗೂ 444 ಖಾಸಗಿ ಕಚೇರಿಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು 789 ಆಂತರಿಕ ದೂರು ಸಮಿತಿಗಳ ರಚನೆಯಾಗಿದೆ. ಬಾಕಿ ಉಳಿದಿರುವ 443 ಸಮಿತಿಗಳ ಮಾಹಿತಿಯನ್ನು ನೀಡುವಂತೆ ಸೂಚಿಸಿದ ಅವರು, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ -2013 ಕಾಯಿದೆ ಕೇವಲ ಕಾಗದಕ್ಕೆ ಸೀಮಿತವಾಗದೇ ಅನುಷ್ಠಾನ ಕಾರ್ಯವು ಸರಿಯಾದ ರೀತಿಯಲ್ಲಿ ಮಹಿಳೆಯರ ಸಮಸ್ಯೆಗೆ ಸ್ಪಂದಿಸುವಂತಾಗಬೇಕು ಎಂದರು.ರಾಜ್ಯ ಮಹಿಳಾ ಆಯೋಗದಲ್ಲಿ ದಾಖಲಾಗಿರುವ ಉಡುಪಿ ಜಿಲ್ಲೆಯ ಸುಮಾರು 54 ಪ್ರಕರಣಗಳ ವಿಚಾರಣೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಸೂಚನೆ ನೀಡಿದರು.ಆಯೋಗದ ಕಾರ್ಯದರ್ಶಿ ರೂಪ ಆರ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಂ ಶಂಕರ್, ಜಿಪಂ ಮು.ಯೋ. ಅಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರಿದ್ದರು.