ಉಡುಪಿ: ಹಿಮ್ಮುಖವಾದ ಮಳೆ

KannadaprabhaNewsNetwork | Published : Jul 12, 2024 1:39 AM

ಸಾರಾಂಶ

ಕಳೆದೊಂದು ವಾರದಿಂದ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಎರಡು ದಿನದಿಂದ ಮಳೆ ಇಳಿಮುಖವಾಗಿದೆ. ಗುರುವಾರ ಬಿಸಿಲಿನ ವಾತಾವರಣ ಕಂಡುಬಂದಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದ ವಾರ ಜಿಲ್ಲೆಯಲ್ಲಿ ಅಪಾರ ಹಾನಿಯನ್ನುಂಟು ಮಾಡಿದ್ದ ಮಳೆ, ಬುಧವಾರ ಮತ್ತು ಗುರುವಾರ ಶಾಂತವಾಗಿದೆ. ಬುಧವಾರ ಮೋಡ ಕವಿದ ವಾತಾವಣವಿದ್ದರೂ ಮಳೆಯಾಗಿರಲಿಲ್ಲ, ಗುರುವಾರ ಅಕಾಶದಲ್ಲಿ ಮೋಡಗಳೂ ಇಲ್ಲದೇ ಸ್ವಚ್ಛವಾಗಿತ್ತು.

ಆದರೂ ಕಳೆದೊಂದು ವಾರದಿಂದ ಸುರಿದ ಮಳೆಯಿಂದ ಅಲ್ಲಲ್ಲಿ ಮನೆಗಳಿಗೆ ಹಾನಿ ಮಾತ್ರ ಮುಂದುವರಿದಿದೆ. ಕಳೆದೆರಡು ದಿನಗಳಲ್ಲಿ ಜಿಲ್ಲಾದ್ಯಂತ ಸುಮಾರು 12 ಮನೆಗಳಿಗೆ ಗಣನೀಯ ಹಾನಿಯಾಗಿದೆ.

ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ವಾಸು ಆರ್. ಪೂಜಾರಿ ಇವರ ವಾಸ್ತವ್ಯದ ಮನೆ ಪೂರ್ಣ ಕುಸಿದಿದ್ದು, ಅವರಿಗೆ ಸುಮಾರು 2,00,000 ರು.ಗಳ ಹಾನಿಯಾಗಿದೆ. ಪುತ್ತೂರು ಗ್ರಾಮದ ನಾರಾಯಣ ಅವರ ಮನೆಗೆ 30,000 ರು., ಶಾಂತ ಪ್ರಭು ಮನೆಗೆ 25,000 ರು., ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಗಿರಿಜಾ ಅವರ ಮನೆಗೆ 50,000 ರು. ನಷ್ಟವಾಗಿದೆ.

ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹರಿಕೃಷ್ಣ ಮನೆಗೆ 25,000 ರು., ಬಾಳ್ಕುದ್ರು ಲಕ್ಷ್ಮೀ ಶಿವಪ್ಪ ಅವರ ಮನೆಗೆ 50,000 ರು., ಡೆನೆಜಾ ಲೋವಿಸ್ ಅವರ ಮನೆಗೆ 10,000 ರು., ಕೋಡಿ ಗ್ರಾಮದ ಕಲ್ಯಾಣಿ ಮನೆಗೆ 15,000 ರು., ಐರೋಡಿ ಗ್ರಾಮದ ಜ್ಯೋತಿ ಮನೆಗೆ 25,000 ರು., ಬನ್ನಾಡಿ ಗ್ರಾಮದ ಶುಭಾವತಿ ಶೆಡ್ತಿ ಮನೆಗೆ 40,000 ರು., ಕೋಟತಟ್ಟು ಮೂಸೆ ಬ್ಯಾರಿ ಅವರ ಮನೆಗೆ 10,000 ರು., ಪಾರಂಪಳ್ಳಿ ಗ್ರಾಮದ ಗೋಪಾಲ ಅವರ ಮನೆಗೆ 10,000 ರು. ನಷ್ಟ ಉಂಟಾಗಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸರಾಸರಿ 43.2 ಮಿ.ಮಿ. ಮಳೆ ಸುರಿದಿದೆ. ಉಳಿದಂತೆ ತಾಲೂಕುವಾರು ಕಾರ್ಕಳ 19.70, ಕುಂದಾಪುರ 53.60, ಉಡುಪಿ 21.90, ಬೈಂದೂರು 57.10, ಬ್ರಹ್ಮಾವರ 57.10, ಕಾಪು 4.80, ಹೆಬ್ರಿ 64.40 ಮಿ.ಮೀ. ಮಳೆಯಾಗಿದೆ.

Share this article