ಉಡುಪಿ: ಇತರ ಅಂಗಗಳಿಗಿಂತ ಕಿವಿಯ ಬಗ್ಗೆ ಹೆಚ್ಚು ಮಹತ್ವ ನೀಡಲಾಗುತ್ತಿಲ್ಲ. ಇದರಿಂದ ಶ್ರವಣ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಈ ದೃಷ್ಟಿಯಿಂದ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ರೆಡ್‌ಕ್ರಾಸ್ ಮಾಡುತ್ತಿದೆ ಎಂದು ರೆಡ್ ಕ್ರಾಸಿನ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹೇಳಿದ್ದಾರೆ.ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಶಾಖೆ, ವಿಕಲಚೇತನರ ಪುನರ್ವಸತಿ ಕೇಂದ್ರ ಉಡುಪಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ ೩೧೭ಸಿ ರ ಪ್ರಾಯೋಜಕತ್ವದಲ್ಲಿ ಆಟೋರಿಕ್ಷಾ ಚಾಲಕರು ಮತ್ತು ಮಾಲಕರ ಸಂಘ ಉಡುಪಿ ಮಣಿಪಾಲ ಟೀಮ್ ಈಶ್ವರ್ ಮಲ್ಪೆ ಆಶ್ರಯದಲ್ಲಿ ನಡೆದ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡುತ್ತಿದ್ದರು.ಶಿಬಿರ ಉದ್ಘಾಟಿಸಿದ ಜಿಲ್ಲಾ ಲಯನ್ಸ್ ಗವರ್ನರ್ ಸಪ್ನಾ ಸುರೇಶ್ ಮಾತಾನಾಡಿ, ಶ್ರವಣ ಸಮಸ್ಯೆಗಳ ಬಗ್ಗೆ ಇಂದು ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈ ಶಿಬಿರವು ಮಹತ್ವಪೂರ್ಣವಾಗಿದೆ ಎಂದರು.ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿದರು. ಜಿಲ್ಲಾಸ್ವತ್ರೆಯ ವಾಕ್ ಮತ್ತು ಶ್ರವಣ ತಜ್ಞೆ ಸಮೀಕ್ಷಾ ಶ್ರವಣ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು. ರೆಡ್‌ಕ್ರಾಸ್ ಆಡಳಿತ ಮಂಡಳಿ ಸದಸ್ಯ ವಿ.ಜಿ. ಶೆಟ್ಟಿ ಶುಭ ಹಾರೈಸಿದರು. ಈಶ್ವರ್ ಮಲ್ಪೆ ತಂಡದ ಸಂಚಾಲಕ ಲವ ಬಂಗೇರ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಜಯಶ್ರೀ ವಾಕ್ ಮತ್ತು ಶ್ರವಣ ತಜ್ಞೆ ನೆಲಿಶಾ ಮತ್ತು ಶ್ರವಣ ತಜ್ಞೆ ಅಂಕಿತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೆಡ್ ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿದರು. ರೆಡ್‌ಕ್ರಾಸ್ ವತಿಯಿಂದ ೧೦ ಜನ ಫಲಾನುಭವಿಗಳಿಗೆ ಉಚಿತವಾಗಿ ಶ್ರವಣ ಸಾಧನ ವಿತರಿಸಲಾಯಿತು.