20ರಂದು ಉಡುಪಿ ನೂತನ ಧರ್ಮಾಧ್ಯಕ್ಷರ ಪೀಠಾರೋಹಣ

KannadaprabhaNewsNetwork |  
Published : Apr 16, 2026, 02:45 AM IST
ಸುದ್ದಿಗೋಷ್ಠಿಯಲ್ಲಿ ವಂ. ಡೆನಿಸ್ ಡೆಸಾ ಮಾಹಿತಿಯನ್ನು ನೀಡಿದರು   | Kannada Prabha

ಸಾರಾಂಶ

20ರಂದು ಉಡುಪಿ ನೂತನ ಧರ್ಮಾಧ್ಯಕ್ಷರ ಪೀಠಾರೋಹಣ

ಉಡುಪಿ: ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರ ಪೀಠಾರೋಹಣ ಮತ್ತು ಅಭಿಷೇಕ ಸಮಾರಂಭವು 20 ಬೆಳಗ್ಗೆ 9 ಗಂಟೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ತಿಳಿಸಿದರು.ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದರು, ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ ಎಫ್‌ಎಬಿಸಿ ಮತ್ತು ಸಿಸಿಬಿಐ ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಅವರ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ, ನೂತನ ಧರ್ಮಾಧ್ಯಕ್ಷರಿಗೆ ಅಭಿಷೇಕ ನಡೆಯಲಿದೆ. ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಹ-ಅಭಿಷೇಕಕಾರರಾಗಿ ಭಾಗವಹಿಸಲಿದ್ದಾರೆ.

ಈ ಐತಿಹಾಸಿಕ ಸಮಾರಂಭದಲ್ಲಿ ಭಾರತ ಮತ್ತು ನೇಪಾಳದಲ್ಲಿ ಪೋಪ್ ಅವರ ವ್ಯಾಟಿಕನ್ ರಾಯಭಾರಿ ಡಾ. ಲಿಯೋಪೋಲ್ಡೊ ಗಿರೆಲ್ಲಿ, ವಿವಿಧ ಮಹಾಧರ್ಮಾಧ್ಯಕ್ಷರು, ಧರ್ಮಾಧ್ಯಕ್ಷರು, ಧರ್ಮಗುರುಗಳು, ವಿವಿಧ ಸಮುದಾಯಗಳ ಗಣ್ಯರು ಹಾಗೂ ಸಾವಿರಾರು ಭಕ್ತರು ಸೇರಿದಂತೆ ಸುಮಾರು 6000ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.ನಂತರ ನೂತನ ಧರ್ಮಾಧ್ಯಕ್ಷರಿಗೆ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಜಿಲ್ಲೆಯ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸಲಿದ್ದಾರೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ದರ್ಮಪ್ರಾಂತ್ಯದ ಆಡಳಿತಾಧಿಕಾರಿ ವಂ.ಡಾ.ಜೇರಾಲ್ಡ್ ಐಸಾಕ್ ಲೋಬೋ, ಕಾರ್ಯಕ್ರಮ ಸಂಚಾಲಕ ವಂ. ಫರ್ಡಿನಾಂಡ್ ಗೋನ್ಸಾಲ್ವಿಸ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ. ಸ್ವೀವನ್ ಡಿಸೋಜ, ಮಧ್ಯಮ ಸಂಯೋಜಕ ಮೈಕೆಲ್ ರೊಡ್ರಿಗಸ್ ಉಪಸ್ಥಿತರಿದ್ದರು.

ಉಡುಪಿಯವರೇ ಆದ ಡಾ. ಲೆಸ್ಲಿ ಡಿಸೋಜಾ: ಡಾ. ಲೆಸ್ಲಿ ಸಿ. ಡಿ’ಸೋಜಾ ಅವರನ್ನು ಪೋಪ್ ಲಿಯೋ ಅವರು ಉಡುಪಿ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

1962 ಆ. 19ರಂದು ಉಡುಪಿ ಜಿಲ್ಲೆಯ ಎರ್ಮಾಳಿನಲ್ಲಿ ಜನಿಸಿದ ಡಾ.ಲೆಸ್ಲಿ ಮೈಸೂರು ವಿವಿಯಿಂದ ಪದವಿ, ಮಂಗಳೂರು ಸೆಂಟ್ ಜೋಸೆಫ್ ಇಂಟರ್ ಡಯೋಸಿಸನ್ ಗುರುಮಠದಲ್ಲಿ ತತ್ವಶಾಸ್ತ್ರ ಹಾಗೂ ಧರ್ಮಶಾಸ್ತ್ರ ಅಧ್ಯಯನ ನಡೆಸಿ, ಬೆಲ್ಜಿಯಂನ ಲೂವನ್ ಕ್ಯಾಥೋಲಿಕ್ ವಿಶ್ವವಿದ್ಯಾಲಯದಿಂದ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

1990 ಮೇ 10ರಂದು ಧರ್ಮಗುರುಗಳಾಗಿ ಅಭಿಷೇಕಗೊಂಡ ಅವರು ಮಂಗಳೂರು ಹಾಗೂ ಉಡುಪಿ ಧರ್ಮಕ್ಷೇತ್ರಗಳಲ್ಲಿ ಸಹಾಯಕ ಧರ್ಮಗುರುಗಳಾಗಿ, ಪ್ರಾಧ್ಯಾಪಕ ಹಾಗೂ ವಿವಿಧ ಚರ್ಚುಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.

ಧರ್ಮಸಮನ್ವಯತೆ ಡಾ. ಲೋಬೋ ಕೊಡುಗೆ: ನಿವೃತ್ತ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು 2012ರಿಂದ 2026ರವರೆಗೆ 13 ವರ್ಷಗಳ ಕಾಲ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಯುವಕರು, ಬಡವರು ಮತ್ತು ಹಿಂದುಳಿದವರ ಬಗ್ಗೆ ವಿಶೇಷ ಕಾಳಜಿ ತೋರಿದ ಅವರು ಸರಳತೆ, ವಿನಯ ಹಾಗೂ ಸೌಮ್ಯ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಧರ್ಮಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿರುವ ಅವರು ಸರ್ವ ಧರ್ಮ ಸಮನ್ವಯತೆಗೆ ವಿಶೇಷ ಕೊಡುಗೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾಯ ದೇವಳಕ್ಕೆ ನೂತನ ಬ್ರಹ್ಮರಥ ಪುರಪ್ರವೇಶ
11 ಕೋಟಿ ರು. ವೆಚ್ಚದಲ್ಲಿ ಕೈಗಾರಿಕಾ ಪ್ರದೇಶ ಹೆದ್ದಾರಿ ಸಂಪರ್ಕ ರಸ್ತೆ ಅಭಿವೃದ್ಧಿ