ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲೆಯಲ್ಲಿ ಬೇಸಿಗೆ ಬಿಸಿಲಿಗೆ ಕುಡಿಯುವ ನೀರಿನ ಮೂಲಗಳು ಬತ್ತುತ್ತಿರುವ ಹಿನ್ನೆಲೆಯಲ್ಲಿ ಸುಮಾರು 203 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ತಿಳಿಸಿದೆ.
ಜಿಲ್ಲೆಯ 155 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 247 ಗ್ರಾಮಗಳಿದ್ದು, ಇವುಗಳಲ್ಲಿ ಬ್ರಹ್ಮಾವರ ತಾಲೂಕಿನ 25 ಗ್ರಾ.ಪಂ.ಗಳ 42 ಗ್ರಾಮಗಳ 337 ಜನವಸತಿ ಪ್ರದೇಶ, ಕಾಪು ತಾಲೂಕಿನ 10 ಗ್ರಾ.ಪಂ.ಗಳ 16 ಗ್ರಾಮಗಳ 100 ಜನವಸತಿ ಪ್ರದೇಶ, ಉಡುಪಿ ತಾಲೂಕಿನ 12 ಗ್ರಾ.ಪಂ.ಗಳ 23 ಗ್ರಾಮಗಳ 164 ವಸತಿ ಪ್ರದೇಶ, ಹೆಬ್ರಿ ತಾಲೂಕಿನ 9 ಗ್ರಾ.ಪಂ.ಗಳ 15 ಗ್ರಾಮಗಳ 79 ಜನವಸತಿ ಪ್ರದೇಶ, ಕಾರ್ಕಳ ತಾಲೂಕಿನ 21 ಗ್ರಾ.ಪಂ.ಗಳ 26 ಗ್ರಾಮಗಳ 88 ಜನವಸತಿ ಪ್ರದೇಶ, ಬೈಂದೂರು ತಾಲೂಕಿನ 15 ಗ್ರಾ.ಪಂ.ಗಳ 22 ಗ್ರಾಮಗಳ 244 ವಸತಿ ಪ್ರದೇಶ ಹಾಗೂ ಕುಂದಾಪುರ ತಾಲೂಕಿನ 38 ಗ್ರಾ.ಪಂ.ಗಳ 59 ಗ್ರಾಮಗಳ 415 ಜನವಸತಿ ಪ್ರದೇಶ ಸೇರಿ, ಒಟ್ಟು ಜಿಲ್ಲೆಯ 130 ಗ್ರಾ.ಪಂ.ಗಳ 203 ಗ್ರಾಮಗಳ 1427 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಅಂದಾಜಿಸಲಾಗಿದೆ.ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸಲು ಸರ್ಕಾರಿ ಹಾಗೂ ಖಾಸಗಿ ಒಡೆತನದ 70 ಕೊಳವೆ ಬಾವಿಗಳನ್ನು ಹಾಗೂ 25 ಬಾವಿಗಳನ್ನು ಗುರುತಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ಉಂಟಾದಲ್ಲಿ ಖಾಸಗಿ ಬೋರ್‌ವೆಲ್, ಬಾವಿ ಗುರುತಿಸಿ, ಅವುಗಳನ್ನು ಬಾಡಿಗೆಗೆ ತೆಗೆದುಕೊಂಡು ನೀರು ಒದಗಿಸಲಾಗುತ್ತದೆ. ಗ್ರಾ.ಪಂ.ಗಳ ಎಸ್.ಎಲ್.ಆರ್.ಎಂ. ವಾಹನಗಳ ಮೂಲಕ ಅಥವಾ ಖಾಸಗಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲು ಕ್ರಮ ವಹಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.ಗ್ರಾಮೀಣ ಸಹಾಯವಾಣಿ 18004257049
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಜಿಲ್ಲಾಮಟ್ಟದಲ್ಲಿ ತೆರೆಯಲಾದ 24*7 ಸಹಾಯವಾಣಿ ಸಂಪರ್ಕ ಸಂಖ್ಯೆ 18004257049 ಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.1.40 ಕೋಟಿ ರು. ಅನುದಾನಜಿಲ್ಲೆಯ ಕಾರ್ಕಳ, ಹೆಬ್ರಿ ಮತ್ತು ಬ್ರಹ್ಮಾವರ ತಾಲೂಕುಗಳನ್ನು ಈಗಾಗಲೇ ಭಾಗಶಃ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಈ ತಾಲೂಕುಗಳಲ್ಲಿ ಕುಡಿಯುವ ನೀರಿನ ತುರ್ತು ಕಾಮಗಾರಿಗೆ ತಲಾ 25 ಲಕ್ಷ ರು.ನಂತೆ ಒಟ್ಟು 75 ಲಕ್ಷ ರು.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಅಲ್ಲದೆ ಪ್ರತೀ ತಾಲೂಕಿಗೆ ತಲಾ 20 ಲಕ್ಷ ರು.ನಂತೆ ಜಿಲ್ಲೆಗೆ ಒಟ್ಟು 140 ಲಕ್ಷ ರು. ಅನುದಾನ ಒದಗಿಸಲಾಗಿದೆ.