ಉಡುಪಿ: ಟ್ಯಾಂಕರ್ ಪಲ್ಟಿ ಅಡುಗೆ ಅನಿಲ ಸೋರಿಕೆ

KannadaprabhaNewsNetwork |  
Published : Mar 17, 2026, 02:45 AM IST
ಪೋಟೊ16ಕೆಎಸಟಿ2: ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಕಸ್ತೂರಿ ಬಾ ಗಾಂಧೀ ಬಾಲಕಿಯರ ವಸತಿ ನಿಲಯದಲ್ಲಿ ನಡೆದ ಕ್ಯಾನ್ಸರ ರೋಗದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ದೇಶದಾದ್ಯಂತ ಅಡುಗೆ ಅನಿಲದ ಕೊರತೆಯಿಂದ ಸಂಕಷ್ಟದ ಸ್ಥಿತಿ ಇದ್ದರೆ, ಇಲ್ಲಿನ ಕಟಪಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್‌ ಉರುಳಿ ಪರಿಸರದಲ್ಲಿ ಅನಿಲ ಸೋರಿಕೆಯಾಗಿ ಕೆಲಕಾಲ ಆತಂಕದ ಸ್ಥಿತಿ ಉಂಟಾಗಿತ್ತು.

ಉಡುಪಿ: ದೇಶದಾದ್ಯಂತ ಅಡುಗೆ ಅನಿಲದ ಕೊರತೆಯಿಂದ ಸಂಕಷ್ಟದ ಸ್ಥಿತಿ ಇದ್ದರೆ, ಇಲ್ಲಿನ ಕಟಪಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್‌ ಉರುಳಿ ಪರಿಸರದಲ್ಲಿ ಅನಿಲ ಸೋರಿಕೆಯಾಗಿ ಕೆಲಕಾಲ ಆತಂಕದ ಸ್ಥಿತಿ ಉಂಟಾಗಿತ್ತು.ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಈ ಟ್ಯಾಂಕರ್ ಟಾಲಕನ ನಿಯಂತ್ರಣ ತಪ್ಪಿ ರಾ.ಹೆ.ಯ ಮಧ್ಯೆ ಮಗುಚಿ ಬಿದ್ದು, ಕಾರೊಂದಕ್ಕೆ ಡಿಕ್ಕಿ ಹೊಡೆದು ನಿಂತುಕೊಂಡಿತು, ಚಾಲಕ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ. ಆದರೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಟ್ಯಾಂಕರಿನಿಂದ ಅಲ್ಪ ಪ್ರಮಾಣದಲ್ಲಿ ಅನಿಲ ಸೊರಿಕೆಯಾಗುತ್ತಿರುವುದು ದುರ್ವಾಸನೆಯಿಂದ ಪತ್ತೆಯಾಯಿತು.

ತಕ್ಷಣ ಮುಂಜಾಗರೂಕತಾ ಕ್ರಮವಾಗಿ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು. ಅಗ್ನಿಶಾಮಕ ದಳದ 3 ವಾಹನಗಳನ್ನು ಕರೆಸಿ, ಟ್ಯಾಂಕರಿಗೆ ನಿರಂತರ ನೀರು ಸಿಂಪರಣೆ ಮಾಡಿ ಸೋರಿಕೆ ತಡೆಯುವ ಪ್ರಯತ್ನ ನಡೆಸಲಾಯಿತು.

ನಂತರ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಯ ಮಂಗಳೂರು ಡಿಪೋದಿಂದ 3 ಖಾಲಿ ಗ್ಯಾಸ್ ಟ್ಯಾಂಕರ್‌ಗಳನ್ನು ತರಿಸಿ, ಮಗುಚಿದ ಟ್ಯಾಂಕರಿನಿಂದ ಅನಿಲವನ್ನು ಖಾಲಿ ಟ್ಯಾಂಕರುಗಳಿಗೆ ತುಂಬಿಸುವ ಕ್ಲಿಷ್ಟಕರ ಕೆಲಸವನ್ನು ಕಂಪನಿಯ ತಜ್ಞರು ನಡೆಸಿದರು.

ಅತ್ಯಂತ ಚಾಗರೂಕತೆ ಮತ್ತು ತಾಳ್ಮೆಯಿಂದ ಈ ನಿಧಾನಗತಿಯ ಕಾರ್ಯ ನಡೆಸಬೇಕಾಗಿರುವುದರಿಂದ ತಡರಾತ್ರಿಯವರೆಗೂ ಈ ಕಾರ್ಯಾಚರಣೆ ಮುಂದುವರಿದಿತ್ತು, ಯಾವುದೇ ರೀತಿಯ ಅನಾಪೇಕ್ಷಿತ ಘಟನೆ ಸಂಭವಿಸಿಲ್ಲ.ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟು ರಾತ್ರಿಯಿಡೀ ಸುಮಾರು ಒಂದು ಕಿ.ಮೀ. ದೂರದಿಂದಲೇ ವಾಹನಗಳನ್ನು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಲು ಅವಕಾಶ ಮಾಡಿಕೊಟ್ಟರು. ಮಂಗಳವಾರ ಮುಂಜಾನೆಯೊಳಗೆ ಅಡುಗೆ ಅನಿಲವನ್ನು ಬೇರೆ ಟ್ಯಾಂಕರುಗಳಿಗೆ ತುಂಬಿಸುವ ಮತ್ತು ಟ್ಯಾಂಕರನ್ನು ತೆರವುಗೊಳಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ಕಲೆಗಳಿಗೆ ಪ್ರಕೃತಿ ನಿಕಟ ಸಂಬಂಧ: ಟಿ.ಪಿ. ರಮೇಶ್
ಮೂಡುಬಿದಿರೆ ಇನ್ಸ್‌ಪೆಕ್ಟರ್ ಪ್ರಕರಣ: ಪೀಡಿತೆಯರಿದ್ದರೆ ದೂರು ನೀಡಲು ಸಲಹೆ