ಉಡುಪಿ: ಇಂದು ನಾಲ್ವರ ಕೊಲೆ ಆರೋಪಿ ಚೌಗುಲೆಯ ವಿಚಾರಣೆ

KannadaprabhaNewsNetwork |  
Published : Nov 21, 2024, 01:03 AM IST
20ಚೌಗುಲೆ | Kannada Prabha

ಸಾರಾಂಶ

ಅ.24ರಂದು ನ್ಯಾಯಾಲಯವು ನ.20ರಂದು 1, 2 ಹಾಗೂ ನ.21ರಂದು 3 ಮತ್ತು 4ನೇ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ ಪಡಿಸಿತ್ತು. ಅದರಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿ ಕೋರ್ಟ್‌ಗೆ ಕರೆದುಕೊಂಡು ಬರಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಸಮೀಪದ ನೇಜಾರು ಗ್ರಾಮದಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು ತಮ್ಮ ವಕಾಲತ್ತನ್ನು ವಾಪಾಸ್‌ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿಗದಿಯಾಗಿದ್ದ ಸಾಕ್ಷಿಗಳ ವಿಚಾರಣೆ ಇಂದಿಗೆ (ಗುರುವಾರಕ್ಕೆ) ಮುಂದೂಡಲಾಗಿದೆ.

ಅ.24ರಂದು ನ್ಯಾಯಾಲಯವು ನ.20ರಂದು 1, 2 ಹಾಗೂ ನ.21ರಂದು 3 ಮತ್ತು 4ನೇ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ ಪಡಿಸಿತ್ತು. ಅದರಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿ ಕೋರ್ಟ್‌ಗೆ ಕರೆದುಕೊಂಡು ಬರಲಾಗಿತ್ತು.ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತನಿರೀಕ್ಷಕರ ನೇತೃತ್ವದಲ್ಲಿ ಆರೋಪಿಯನ್ನು ಬುಧವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಸಂದರ್ಭ ಆರೋಪಿ ಪರ ವಕೀಲರು, ಇನ್ನು ಮುಂದೆ ನಾವು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಮತ್ತು ನಮ್ಮ ವಕಾಲತ್ತನ್ನು ವಾಪಾಸ್ ಪಡೆದುಕೊಳ್ಳುತ್ತೇವೆ ಎಂದು ಕೋರ್ಟಿಗೆ ತಿಳಿಸಿದರು.ಅದಕ್ಕೆ ಆರೋಪಿ ಚೌಗುಲೆ, ಈ ಹಿನ್ನೆಲೆಯಲ್ಲಿ ನನ್ನ ಪತ್ನಿ ಹೊಸ ವಕೀಲರನ್ನು ನೇಮಕ ಮಾಡಲಿದ್ದಾರೆ ಎಂದರು.

ಆಕೆಯನ್ನು ವಿಚಾರಿಸಿ ಕೂಡಲೇ ವಕೀಲರನ್ನು ನೇಮಕ ಮಾಡುವಂತೆ ನ್ಯಾಯಾಧೀಶ ಎ.ಸಮೀವುಲ್ಲಾ ಆರೋಪಿಗೆ ಸೂಚಿಸಿದರು. ಇದಕ್ಕೆ ವಿಚಾರಣೆ ಇಡೀ ನ್ಯಾಯಾಲಯವೇ ಸಿದ್ಧವಾಗಿರುವಾಗ ಕೊನೆ ಕ್ಷಣದಲ್ಲಿ ಆರೋಪಿ ವಕೀಲರು ವಕಾಲತ್ತು ವಾಪಾಸ್‌ ಪಡೆದಿರುವುದಕ್ಕೆ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಆಕ್ಷೇಪ ಸಲ್ಲಿಸಿದರು.ಬುಧವಾರ ನಡೆಯಬೇಕಾಗಿದ್ದ ಸಾಕ್ಷಿಗಳ ವಿಚಾರಣೆ ನಡೆಯದೆ, ಮುಂದಿನ ಪ್ರಕ್ರಿಯೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಇಂದು ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವುದರಿಂದ ಆತನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಹಿರಿಯಡ್ಕ ಜೈಲಿಗೆ ಕೊಂಡೊಯ್ಯಲಾಯಿತು ಎಂದು ತಿಳಿದುಬಂದಿದೆ.

PREV

Recommended Stories

ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯ
ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ