ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಬ್ರಹ್ಮಾವರದ ಬಿಜೆಪಿ ನಾಯಕ ಬಿರ್ತಿ ರಾಜೇಶ್ ಶೆಟ್ಟಿ ಮತ್ತು ಅವರ ಸ್ನೇಹಿತರು ಪ್ಯಾಕೇಜ್ ಟೂರ್ ನಲ್ಲಿ ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲಿಂದಲೇ ಮಾಧ್ಯಮ ಮಿತ್ರದ ಜೊತೆ ಮಾತನಾಡಿರುವ ಅವರು, ತಾವೆಲ್ಲರೂ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.
ತಾವೀಗ ಪಹಲ್ಗಾಮ್‌ನಿಂದ ಸುಮಾರು 150 ಕಿ.ಮೀ. ದೂರದಲ್ಲಿದ್ದೇವೆ. ಪಹಲ್ಗಾಮ್ ಘಟನೆ ಕೇಳಿ ತಮಗೆ ಬಹಳ ಆತಂಕವಾಗಿತ್ತು. ಮಂಗಳವಾರದ ವರೆಗೂ ತಾವು ಎಲ್ಲೂ ಸೈನಿಕರ ಕಾವಲು ನೋಡಿಲ್ಲ, ಕಾಶ್ಮೀರ ಬಹಳ ಶಾಂತಿಯುತವಾಗಿ ಗೋಚರಿಸುತ್ತಿತ್ತು. ಆದರೆ ಈಗ ಹೆಜ್ಜೆ ಹೆಜ್ಜೆಗೂ ಸೈನಿಕರ ಕಾವಲು ಕಾಣುತ್ತಿದೆ ಎಂದು ವಿವರಿಸಿದ್ದಾರೆ.ಬುಧವಾರ ತಾವೂ ಪಹಲ್ಗಾಮ್‌ಗೆ ಹೋಗಬೇಕಾಗಿತ್ತು. ಆದರೆ ಅಲ್ಲೀಗ ಯಾರನ್ನೂ ಬಿಡುತ್ತಿಲ್ಲ. ಆದ್ದರಿಂದ ಶ್ರೀನಗರದ ಸುತ್ತಮುತ್ತಲಿನ ಸೋನಾ ಮಾರ್ಗ್, ಗುಲ್ ಮಾರ್ಗ್ ಮುಂತಾದ ಸುರಕ್ಷಿತ ಪ್ರದೇಶಗಳಿಗೆ ಭೇಟಿ ನೀಡುತಿದ್ದೇವೆ. ಬಹುತೇಕ ಕಡೆಗಳಲ್ಲಿ ಬಂದ್ ವಾತಾವರಣವಿದೆ. ಕೆಲವು ಕಡೆಗಳಲ್ಲಿ ಪ್ರತಿಭಟನೆ ಕೂಡ ನೋಡಿದೆವು ಎಂದು ವಿವರಿಸಿದ್ದಾರೆ.
ಕೆಲವು ವರ್ಷಗಳಿಂದ ಕಾಶ್ಮೀರದಲ್ಲಿ ಭಯದ ವಾತಾವರಣ ಕಡಿಮೆಯಾಗಿ, ಹೊರರಾಜ್ಯದ ಪ್ರವಾಸಿಗಳು ಬಂದು, ಮತ್ತೆ ಪ್ರವಾಸೋದ್ಯಮ ಚಿಗುರುವುದಕ್ಕೆ ಆರಂಭವಾಗಿತ್ತು, ಆದರೆ ನರಮೇಧ ಘಟನೆಯಿಂದ ಮತ್ತೆ ಎಲ್ಲ ನಷ್ಟವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ರಾಜೇಶ್ ಶೆಟ್ಟಿ ಹೇಳಿದ್ದಾರೆ.