ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಅಗಲಿದ ಸಂಘದ ಸದಸ್ಯ ಹಾಗೂ ಪತ್ರಕರ್ತ ಸಂದೀಪ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಶನಿವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಅಗಲಿದ ಸಂಘದ ಸದಸ್ಯ ಹಾಗೂ ಪತ್ರಕರ್ತ ಸಂದೀಪ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಶನಿವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ. ಹುಟ್ಟು ಸಾವಿನ ನಡುವೆ ಒಬ್ಬ ವ್ಯಕ್ತಿ ಸಮಾಜದಲ್ಲಿ ಬದುಕಿದ ರೀತಿ, ಗಳಿಸಿದ ಪ್ರೀತಿ ಮಾತ್ರ ಶಾಶ್ವತ. ಪ್ರತಿಭಾವಂತ ಪತ್ರಕರ್ತನನ್ನು ನಾವು ಕಳೆದುಕೊಂಡಿದ್ದೇವೆ. ಎಲ್ಲರನ್ನು ಪ್ರೀತಿಸುವ, ಆಕರ್ಷಿಸುವ ವ್ಯಕ್ತಿತ್ವ ಅವರದ್ದು. ಬಡ ಕುಟುಂಬದ ಕಠಿಣ ಶ್ರಮದಿಂದ ಬೆಳೆದ ಪ್ರತಿಭಾವಂತನ ಕುಟುಂಬದ ಜೊತೆ ಸಮಾಜ ನಿಲ್ಲಬೇಕಾಗಿದೆ ಎಂದರು.ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ನುಡಿನಮನ ಸಲ್ಲಿಸಿ, ಉತ್ತಮ ಪತ್ರಕರ್ತ ಹಾಗೂ ತಂತ್ರಜ್ಞ ಆಗಿದ್ದ ಸಂದೀಪ್ ಅಗಲಿಕೆ ನಮ್ಮ ಸಂಘಕ್ಕೆ ತುಂಬಲಾರದ ನಷ್ಟ. ಅವರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ 21 ದಿನ ಜೀವನ್ಮರಣ ಹೋರಾಟದಲ್ಲಿರುವ ಸಂದರ್ಭ ಸಂಘದ ಮನವಿಯಂತೆ ಸಂಘದ ಸದಸ್ಯರು ಹಾಗೂ ದಾನಿಗಳು ಬಹಳ ದೊಡ್ಡ ಮೊತ್ತದಲ್ಲಿ ಆರ್ಥಿಕ ನೆರವು ನೀಡಿ ಸಹಕರಿಸಿದ್ದಾರೆ. ಅವರೆಲ್ಲರಿಗೂ ಸಂಘ ಚಿರಋಣಿಯಾಗಿದೆ ಎಂದು ತಿಳಿಸಿದರು.ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ, ಬ್ರಹ್ಮಾವರ ತಾಲೂಕು ಸಂಘದ ಅಧ್ಯಕ್ಷ ರಾಜೇಶ್ ಅಚ್ಲಾಡಿ, ಹಿರಿಯ ಪತ್ರಕರ್ತರಾದ ಶಶಿಧರ್ ಮಾಸ್ತಿಬೈಲು, ನಾಗರಾಜ್ ರಾವ್, ಜನಾರ್ದನ ಕೊಡವೂರು, ರಹೀಂ ಉಜಿರೆ, ಹರೀಶ್ ಪಾಲೇಚಾರ್, ಚೇತನ್ ಮಟಪಾಡಿ, ಪರೀಕ್ಷಿತ್ ಶೇಟ್, ಸಂದೀಪ್ ಪೂಜಾರಿಯ ಸಹೋದರಿ ಸರಿತಾ ಮೊದಲಾದವರು ನುಡಿನಮನ ಸಲ್ಲಿಸಿದರು.ಜಿಲ್ಲಾ ಹಾಗೂ ತಾಲೂಕು ಸಂಘಗಳು ಮತ್ತು ದಾನಿಗಳಿಂದ ಸಂಗ್ರಹಿಸಲಾದ ಆರ್ಥಿಕ ನೆರವನ್ನು ಸಂದೀಪ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಸಂದೀಪ್ ಅವರ ತಾಯಿ ಜಲಜಾ, ತಂದೆ ವಿಠಲ ಹಾಗೂ ಕುಟುಂಬಸ್ಥರು ಹಾಜರಿದ್ದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.