ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೌಮಾರಭೃತ್ಯ ವಿಭಾಗವು ಸ್ತನ್ಯಪಾನದ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸ್ತನ್ಯಪಾನ ಸಪ್ತಾಹವನ್ನು ಆಚರಿಸಿತು.ಆ.5ರಂದು ಕೌಮಾರಭೃತ್ಯ ವಿಭಾಗದ ಸಹಪ್ರಾಧ್ಯಾಪಕಿಯಾದ ಡಾ. ಸಹನಾ ಶಂಕರಿ, ಸ್ತನ್ಯಪಾನದ ಕುರಿತು ಸತ್ಯಾ ಸತ್ಯತೆ, ಎಂಬ ವಿಷಯದ ಕುರಿತು ಆನ್ಲೈನ್ ಮಾಹಿತಿ ಉಪನ್ಯಾಸ ಕಾರ್ಯಕ್ರಮ ನೀಡಿದರು.ಆ.6ರಂದು ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಕೌಮಾರಭೃತ್ಯ ವಿಭಾಗ ಮತ್ತು ರೋಟರಾಕ್ಟ್ ಕ್ಲಬ್‌ನ ಸಹಯೋಗದೊಂದಿಗೆ ಸ್ತನ್ಯಪಾನದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಎದೆ ಹಾಲುಣಿಸುವ ತಾಯಂದಿರಿಗೆ ಹಾಗೂ ಇತರ ಆಸ್ಪತ್ರೆಯ ಆರೋಗ್ಯಾಕಾಂಕ್ಷಿಗಳಿಗೆ ಬೀದಿ ನಾಟಕವನ್ನು ಆಯೋಜಿಸಲಾಗಿತ್ತು.ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ವರ್ಧಿಸಿ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ನಾಟಕದ ಮೂಲಕ ತಿಳಿಸಲಾಯಿತು. ಎದೆ ಹಾಲನ್ನು ವರ್ಧಿಸುವ ವಿವಿಧ ಗಿಡಮೂಲಿಕೆಗಳ ಪರಿಚಯ ಮಾಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಮಣಿಪಾಲ ಅಧ್ಯಕ್ಷೆ ಶಶಿಕಲಾ ರಾಜನ್ ಉಪಸ್ಥಿತರಿದ್ದರು. ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹಾಗೂ ಆಡಳಿತ ಅಧಿಕಾರಿ ಡಾ. ನಿಶಾಂತ್ ಪೈ, ಕೌಮಾರಭೃತ್ಯ ವಿಭಾಗದ ಮುಖ್ಯಸ್ಥ ಡಾ. ಪೃಥ್ವಿರಾಜ್ ಪುರಾಣಿಕ್, ಕಾರ್ಯಕ್ರಮದ ಸಂಯೋಜಕರು ಹಾಗೂ ಸಹಪ್ರಾಧ್ಯಾಪಕಿ ಡಾ. ಸಹನಾಶಂಕರಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ. ಕಾವ್ಯ, ಡಾ. ಚಿತ್ರಲೇಖ ಹಾಗೂ ಡಾ. ಅಂಜು ಕೆ.ಎಲ್. ಕಾರ್ಯಕ್ರಮದಲ್ಲಿ ಸಹಕರಿಸಿದರು.ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿಗಳು ಬೀದಿ ನಾಟಕವನ್ನು ಪ್ರದರ್ಶಿಸಿದರು. ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ದಾದಿಯರು, ಆರೋಗ್ಯಾಕಾಂಕ್ಷಿಗಳು ಇತರ ಸಿಬ್ಬಂದಿ ಸೇರಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.