ಯುಗಾದಿಗೆ ಇಲ್ಲಿ ಸಂಭ್ರಮದ ಬದಲು ಸೂತಕದ ಛಾಯೆ

KannadaprabhaNewsNetwork |  
Published : Mar 30, 2025, 03:02 AM IST
ಕೂಡ್ಲಿಗಿ ಸಮೀಪದ ಗಜಾಪುರ ಗ್ರಾಮ. | Kannada Prabha

ಸಾರಾಂಶ

ಎಲ್ಲರೂ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದರೆ ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ನೂರಾರು ಕುಟುಂಬಗಳು ಹಬ್ಬ ಮಾಡದೇ ಸೂತಕ ಆವರಿಸಿದಂತೆ ಇರುತ್ತಾರೆ.

ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಲ್ಲಿ ಯುಗಾದಿ ಸಂಭ್ರಮವಿಲ್ಲಹಬ್ಬ ಆಚರಿಸಿದರೆ ಕೇಡಾಗುವುದೆಂಬ ನಂಬಿಕೆ೨ ದಿನಗಳು ಸ್ನಾನವಿಲ್ಲ ಹೊಸಬಟ್ಟೆ ತೊಡುವುದಿಲ್ಲ

ಭೀಮಣ್ಣ ಗಜಾಪುರಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಎಲ್ಲರೂ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದರೆ ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ನೂರಾರು ಕುಟುಂಬಗಳು ಹಬ್ಬ ಮಾಡದೇ ಸೂತಕ ಆವರಿಸಿದಂತೆ ಇರುತ್ತಾರೆ.ದೇಶವೇ ಪ್ರಕೃತಿಯ ಹೊಸ ವರ್ಷ ಯುಗಾದಿ ಹಬ್ಬ ಆಚರಿಸಿದರೆ, ಇತ್ತ ಈ ಹಳ್ಳಿಗಳಲ್ಲಿ ಮಾತ್ರ ಯುಗಾದಿ ಅಪಶಕುನ ಎಂಬಂತೆ ಕೆಲವು ಕುಟುಂಬಗಳು ಈ ಹಬ್ಬ ಯಾಕೆ ಬರುತ್ತದೆ ಎಂಬ ನಿರುತ್ಸಾಹ ವ್ಯಕ್ತಪಡಿಸುತ್ತಾರೆ. ಕೊಟ್ಟೂರು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು ಸೇರಿ ನಾನಾ ತಾಲೂಕುಗಳ ಕೆಲ ಹಳ್ಳಿಗಳಲ್ಲಿ ಬಾರಿಕರು, ವಾಲ್ಮೀಕಿ ಸಮುದಾಯದವರಿಗೆ ಮಾತ್ರ ಈ ಯುಗಾದಿಯು ನಿಷಿದ್ಧ ವೆಂಬ ನಂಬಿಕೆ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿದೆ. ೨ ದಿನ ಸ್ನಾನ ಮಾಡಲ್ಲ:

ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಪಟ್ಟಣ, ಕೊಟ್ಟೂರು ತಾಲೂಕಿನ ಗಜಾಪುರ, ಕಂದಗಲ್ಲು, ಅಕ್ಕಾಪುರ, ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳು, ಸಂಡೂರು ತಾಲೂಕಿನ ದೇವರ ಮಲ್ಲಾಪುರ, ಬಂಡ್ರಿ, ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಾಪುರ, ಹನಸಿ, ಹಡಗಲಿ ತಾಲೂಕಿನ ಇಟಿಗಿ ಸೇರಿ ಹತ್ತಾರು ಹಳ್ಳಿಗಳಲ್ಲಿ ಬಾರಿಕರು, ನಾಯಕ ಸಮುದಾಯದ ಕೆಲವು ಕುಟುಂಬಗಳು ಯುಗಾದಿ ಆಚರಿಸಲ್ಲ. ಗಜಾಪುರ ಗ್ರಾಮವೊಂದರಲ್ಲೇ ೧೦೦ಕ್ಕೂ ಹೆಚ್ಚು ಕುಟುಂಬಗಳು ಯುಗಾದಿ ಅಚರಿಸಲ್ಲ. ಯುಗಾದಿ ಹಬ್ಬ ಆಚರಣೆಯ ೨ ದಿನಗಳ ಸಂದರ್ಭದಲ್ಲಿ ಹುಟ್ಟಿದ ಕೂಸಿಗೂ ಸ್ನಾನ ಮಾಡಿಸಲ್ಲ. ಅದರಂತೆ, ಆ ಕುಟುಂಬಗಳಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಸೇರಿ ಯಾರೊಬ್ಬರೂ ಸ್ನಾನ ಮಾಡಲ್ಲ, ಹೊಸಬಟ್ಟೆ ಧರಿಸುವುದಿಲ್ಲ. ತಲೆ ಬಾಚುವುದಿಲ್ಲ, ಬೇರೆ ಕಡೆ ಪ್ರಯಾಣ ಮಾಡುವುದಿಲ್ಲ. ಹೊಸ ವಸ್ತು ಖರೀದಿಸುವುದಿಲ್ಲ. ಹಾಗೇನಾದರೂ ಮಾಡಿದರೆ ಕೇಡಾಗುವುದೆಂಬ ನಂಬಿಕೆ, ಭಯ ಈ ಕುಟುಂಬಗಳಲ್ಲಿ ಮನೆಮಾಡಿರುವುದರಿಂದ ನೂರಾರು ವರ್ಷಗಳಿಂದಲೂ ಇಂಥ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗಿದೆ.

ಪೂರ್ವಜರ ಹಿನ್ನೆಲೆ:ಯುಗಾದಿ ಹಬ್ಬದ ದಿನದಂದು ನಮ್ಮ ಪೂರ್ವಜರು ಕೆಲಸಕ್ಕೆಂದು ಹೋದವರು ವಾಪಸ್ ಮನೆಗೆ ಬಂದಿಲ್ಲ. ಪ್ರತಿ ವರ್ಷದ ಯುಗಾದಿಯೂ ನಮ್ಮ ಕುಟುಂಬಗಳಲ್ಲಿ ಅಪಶಕುನವಾಗಿದೆ ಎಂಬ ಹಿನ್ನೆಲೆ ತಾತ, ಮುತ್ತಾತಂದಿರ ಕಾಲದಿಂದಲೂ ಪಾಲಿಸುತ್ತಾ ಬರಲಾಗಿದೆ. ಹೀಗಾಗಿ, ಹತ್ತಾರು ಹಳ್ಳಿಗಳಲ್ಲಿ ಬಾರಿಕರು ಮತ್ತು ವಾಲ್ಮೀಕಿ ಸಮುದಾಯದ ಕೆಲ ಕುಟುಂಬಗಳಲ್ಲಿ ವಿದ್ಯಾವಂತರೂ ಸೇರಿ ಎಲ್ಲರೂ ಸಹ ನೂರಾರು ವರ್ಷಗಳಿಂದ ಹಿರಿಯರು ಪಾಲಿಸಿಕೊಂಡು ಬಂದಂಥ ಪದ್ಧತಿಯನ್ನು ಈಗಲೂ ಮುಂದುವರಿಸಿಕೊಂಡು ಬಂದಿರುವುದರಿಂದ ನೂರಾರು ಕುಟುಂಬಗಳಲ್ಲಿ ಯುಗಾದಿ ಆಚರಣೆ ಕಹಿಯಂತಾಗಿದೆ ಎನ್ನುತ್ತಾರೆ ಗಜಾಪುರ ಗ್ರಾಮದ ಬಾರಿಕರ ಮಂಜುನಾಥ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.20ರಿಂದ ಕರಾವಳಿ ಉತ್ಸವ: 6 ಬೀಚ್‍ಗಳಲ್ಲಿ ಕಾರ್ಯಕ್ರಮ
ರೈತರಿಗೆ ಭರವಸೆ ಮೂಡಿಸಿದ ಚಳಿ: ತೋಟಗಾರಿಕೆಗೆ ಅನುಕೂಲ