ಕನ್ನಡಪ್ರಭ ವಾರ್ತೆ ಕಾಗವಾಡ
ಮಹಾರಾಷ್ಟ್ರದ ಕೋಯ್ನಾ ಸೇರಿದಂತೆ ವಿವಿಧ ಜಲಾಶಯಗಳಿಂದ ಪ್ರತಿದಿನ 2 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಕರ್ನಾಟಕಕ್ಕೆ ಹರಿದು ಬರುತ್ತಿದ್ದು, ಕಳೆದ ನಾಲ್ಕಾರು ದಿನಗಳಿಂದ ವರುಣ ಆರ್ಭಟ ತಗ್ಗಿದ್ದರಿಂದ ಕೃಷ್ಣಾ ನದಿಯ ಒಳಹರಿವಿನಲ್ಲಿ ಇಳಿಕೆ ಕಂಡು ಬಂದಿದೆ. ಇದರಿಂದ ಉಗಾರ-ಕುಡಚಿ ಸೇರಿದಂತೆ ಅಥಣಿ, ಕಾಗವಾಡ ತಾಲೂಕಿನ ಎಲ್ಲ ರಸ್ತೆಗಳು ಸಂಚಾರಕ್ಕೆ ಮುಕ್ತಗೊಂಡಿವೆ.ಕಳೆದ 6 ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಅಥಣಿ, ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಹಲವಾರು ಗ್ರಾಮಗಳ ತಗ್ಗು ಪ್ರದೇಶದಲ್ಲಿಯ ಸಾವಿರಾರು ಎಕರೆ ಭೂ ಪ್ರದೇಶದಲ್ಲಿ ಕಬ್ಬಿನ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದವು. ಕಳೆದ ನಾಲ್ಕಾರು ದಿನಗಳಿಂದ ಮಳೆ ಕ್ಷೀಣಿಸಿದ್ದರಿಂದ ಗುರುವಾರ ನಸುಕಿನ ಜಾವ ಸೇತುವೆ ಸಂಚಾರಕ್ಕೆ ಮುಕ್ತಗೊಂಡಿದೆ.ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಜುಗೂಳ, ಮಂಗಾವತಿ, ಶಹಾಪೂರ, ಕುಸನಾಳ, ಮೊಳವಾಡ, ಉಗಾರ, ಕೃಷ್ಣಾ ಕಿತ್ತೂರ, ಕಾತ್ರಾಳ, ಬಣಜವಾಡ, ಅಥಣಿ ತಾಲೂಕಿನ ತೀರ್ಥ, ಸಪ್ತಸಾಗರ,ನಾಗನೂರ, ಸವದಿ, ನದಿ-ಇಂಗಳವಾಗ, ಸಪ್ತಸಾಗರ, ಸವದಿ ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ಆವರಿಸಿತ್ತು. ಇಂದು ಪ್ರವಾಹ ಕ್ಷೀಣಿಸಿದ್ದು, ಉಗಾರ-ಕುಡಚಿ,ಉಗಾರ ಖುರ್ದ-ಉಗಾರ ಬುದ್ರುಕ್, ರಸ್ತೆಯು ಸಾಗಾಟಕ್ಕೆ ಮುಕ್ತಗೊಂಡಿದೆ.