ಯುಜಿಡಿ ಕೊಳಚೆ ನೀರು ಹೊಸಹೊಳಲು ದೊಡ್ಡಕೆರೆ ಸೇರಿ ಮಲೀನ: ಶಾಸಕ ಎಚ್.ಟಿ.ಮಂಜು ಆಕ್ರೋಶ

KannadaprabhaNewsNetwork | Published : Dec 27, 2024 12:46 AM

ಸಾರಾಂಶ

ಹೊಸಹೊಳಲು ಕೆರೆ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ಕೆರೆ ಕಲುಷಿತಗೊಳ್ಳುತ್ತಿರುವುದರ ವಿರುದ್ಧ ಕ್ರಮ ವಹಿಸಬೇಕಾದ ಜವಾಬ್ದಾರಿ ನೀರಾವರಿ ಇಲಾಖೆಗೆ ಸೇರಿದೆ. ಆದರೆ, ಸ್ಥಳ ಪರಿಶೀಲನೆಗೆ ಬರುವುವಂತೆ ಸೂಚಿಸಿದರೂ ನೀರಾವರಿ ಇಲಾಖೆ ಎಇಇ ಆನಂದ್ (ಪ್ರಭಾರ ಇಇ) ಸ್ಥಳಕ್ಕೆ ಬರಲಿಲ್ಲ. ಬದಲಾಗಿ ಕಿಕ್ಕೇರಿ ವ್ಯಾಪ್ತಿಯ ಇಂನಿಯರೊಬ್ಬರನ್ನು ಕಾಟಾಚಾರಕ್ಕೆ ಕಳುಹಿಸಿದ್ದರು. ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ ತೋರಿಸಿದ ಇಂಜಿನಿಯರ್ ಆನಂದ್ ಅವರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಇವರ ವಿರುದ್ಧ ಕ್ರಮ ವಹಿಸುವಂತೆ ಮೇಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪುರಸಭಾ ವ್ಯಾಪ್ತಿಯ ಪಟ್ಟಣದ ಯುಜಿಡಿ ಕೊಳಚೆ ನೀರು ಹೊಸಹೊಳಲು ದೊಡ್ಡ ಕೆರೆ ಸೇರಿ ನೀರು ಮಲೀನವಾಗುತ್ತಿದ್ದರೂ ಯಾವುದೇ ಕ್ರಮ ವಹಿಸದ ಅಧಿಕಾರಿಗಳ ವಿರುದ್ಧ ಶಾಸಕ ಎಚ್.ಟಿ.ಮಂಜು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದ ಮೈಸೂರು ರಸ್ತೆಯ ಯುಜಿಡಿ ತ್ಯಾಜ್ಯ ವಿಲೇ ಕೇಂದ್ರದ ಸ್ಥಳಕ್ಕೆ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದ ಶಾಸಕ ಮಂಜು ಅವರು, ಪಟ್ಟಣದ ಯುಜಿಡಿ ಮಲೀನ ನೀರು ಕಾಗುಂಡಿ ಹಳ್ಳದ ಮೂಲಕ ಹೊಸಹೊಳಲು ದೊಡ್ಡ ಕೆರೆ ಸೇರಿ ಕೆರೆ ನೀರು ಕಲುಷಿತಗೊಳ್ಳುತ್ತಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹೊಸಹೊಳಲು ದೊಡ್ಡಕೆರೆ ನೀರು ಮಲೀನವಾಗುತ್ತಿದ್ದು, ಇದಕ್ಕೆ ಕಾರಣಕರ್ತರಾದ ಪುರಸಭೆ, ನೀರಾವರಿ ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸ್ಥಳದಲ್ಲಿದ್ದ ಪರಿಸರ ಇಲಾಖೆ ಅಧಿಕಾರಿ ಅಶ್ವಿನಿ ಅವರಿಗೆ ಸೂಚಿಸಿದರು.

ಪಟ್ಟಣದ ಯುಜಿಡಿ ತ್ಯಾಜ್ಯ ಕಾಗುಂಡಿ ಹಳ್ಳದ ಪಕ್ಕದ ತ್ಯಾಜ್ಯ ವಿಲೇ ಘಟಕದಿಂದ ಹೊಸಹೊಳಲು ಬಳಿ ನಿರ್ಮಿಸಿರುವ ತ್ಯಾಜ್ಯ ಶುದ್ದೀಕರಣ ಘಟಕಕ್ಕೆ ಲಿಫ್ಟಿಂಗ್ ಆಗಬೇಕು. ಆದರೆ, ಘಟಕದ ಲಿಫ್ಟಿಂಗ್ ಮೋಟಾರುಗಳು ವರ್ಷಗಳ ಹಿಂದೆಯೇ ಕೆಟ್ಟು ಹೋಗಿವೆ. ಇದರ ಪರಿಣಾಮ ಕೊಳಚೆ ನೀರು ದೊಡ್ಡ ಕೆರೆ ಸೇರಿ ಕೆರೆಯ ನೀರು ಮಲೀನಗೊಳ್ಳುತ್ತಿದೆ ಎಂದು ಕಿಡಿಕಾರಿದರು.

ಯುಜಿಡಿ ನೀರನ್ನು ಕೆರೆಗೆ ಹರಿಯಬಿಡುತ್ತಿರುವುದರ ವಿರುದ್ಧ ರೈತರು ಶಾಸಕರ ಗಮನಕ್ಕೆ ತಂದಿದ್ದಾರೆ. ಪತ್ರಿಕೆಗಳೂ ಇದರ ಬಗ್ಗೆ ವರದಿ ಮಾಡಿದ್ದವು. ಸಾರ್ವಜನಿಕ ದೂರುಗಳ ಬಗ್ಗೆಯೂ ಅಧಿಕಾರಿಗಳು ತಲೆಕೆಡಿಸಿಕೊಂಡಿರಲ್ಲಿಲ್ಲ. ಆದಕಾರಣ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳೊಂದಿಗೆ ಯುಜಿಡಿ ಲಿಫ್ಟಿಂಗ್ ಕೆಂದ್ರದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ, ಪುರಸಭೆ ಈ ಹಿಂದಿನ ಆಡಳಿತ ಮಂಡಳಿ ಯುಜಿಡಿ ಕಾಮಗಾರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಯುಜಿಡಿ ಕಾಮಗಾರಿ ಮುಗಿದು ಅದನ್ನು ಪುರಸಭೆಗೆ ಹಸ್ತಾಂತರಿಸಿರುವುದರಿಂದ ಮಲೀನ ನೀರು ಕಾಗುಂಡಿ ಹಳ್ಳ ಸೇರುತ್ತಿರುವುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಒಳಚರಂಡಿ ಮಂಡಳಿ ಅಧಿಕಾರಿಗಳು ಹೇಳುತ್ತಿದ್ದಾರೆ. ಕಾಮಗಾರಿ ಮುಗಿಯದ ಕಾರಣ ಇದನ್ನು ನಾವು ಹಸ್ತಾಂತರ ಮಾಡಿಕೊಂಡಿಲ್ಲ ಎಂದು ಇಂದಿನ ಪುರಸಭೆ ಆಡಳಿತ ವರ್ಗ ಹೇಳುತ್ತಿದೆ.

ಯುಜಿಡಿ ಸಮಸ್ಯೆ ನಾಗರಿಕರ ಬಹಳ ದಿನಗಳ ಸಮಸ್ಯೆಯಾಗಿದೆ. ಕೆಲಸ ಮುಗಿದಿದೆ ಎಂದು ಪುರಸಭಾ ಅಧಿಕಾರಿಗಳು ಮಾಹಿತಿ ನೀಡಿದ್ದೀರಿ. ಪಟ್ಟಣದ ಬಸವೇಶ್ವರ ನಗರ, ಸೆಂಟ್ ಮಾರ್ಥಾಸ್ ಶಾಲೆ, ಹೊಸಹೊಳಲು, ಜಯನಗರ ಬಡಾವಣೆ, ಎಲ್ಐಸಿ ಮುಂತಾದ ಕಡೆಗಳಲ್ಲಿ ಯುಜಿಡಿ ತ್ಯಾಜ್ಯ ರಸ್ತೆಗೆ ಉಕ್ಕಿ ಹರಿಯುತ್ತಿದೆ. ಈ ತ್ಯಾಜ್ಯ ಕಾಗುಂಡಿ ಹಳ್ಳದ ಮೂಲಕ ಹೊಸಹೊಳಲು ಕೆರೆ ಸೇರುತ್ತಿದೆ. ಇಲ್ಲಿಂದ ಕೆ.ಆರ್.ಎಸ್ ಸೇರುತ್ತಿದೆ.

ಸಾವಿರಾರು ಜನರು ಬಳಸಿ ಉಪಯೋಗಿಸಿದ ರಾಸಾಯನಿಕ ಮಿಶ್ರಿತ ತ್ಯಾಜ್ಯದ ನೀರನ್ನು ಪರೋಕ್ಷವಾಗಿ ಕುಡಿಯಲಾಗುತ್ತಿದೆ. ಕೂಡಲೇ ಯುಜಿಡಿ ಸಮಸ್ಯೆಯನ್ನು ಸಮರ್ಪಕವಾಗಿ ವಿಲೇ ಮಾಡಲೇ ಬೇಕು ಎಂದು ಅಧಿಕಾರಿಗಳಿಗೆ ಶಾಸಕ ಎಚ್.ಟಿ.ಮಂಜು ಸೂಚಿಸಿದರು.

ಇಂಜಿನಿಯರ್ ಆನಂದ್ ವಿರುದ್ಧ ಆಕ್ರೋಶ:

ಹೊಸಹೊಳಲು ಕೆರೆ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ಕೆರೆ ಕಲುಷಿತಗೊಳ್ಳುತ್ತಿರುವುದರ ವಿರುದ್ಧ ಕ್ರಮ ವಹಿಸಬೇಕಾದ ಜವಾಬ್ದಾರಿ ನೀರಾವರಿ ಇಲಾಖೆಗೆ ಸೇರಿದೆ. ಆದರೆ, ಸ್ಥಳ ಪರಿಶೀಲನೆಗೆ ಬರುವುವಂತೆ ಸೂಚಿಸಿದರೂ ನೀರಾವರಿ ಇಲಾಖೆ ಎಇಇ ಆನಂದ್ (ಪ್ರಭಾರ ಇಇ) ಸ್ಥಳಕ್ಕೆ ಬರಲಿಲ್ಲ. ಬದಲಾಗಿ ಕಿಕ್ಕೇರಿ ವ್ಯಾಪ್ತಿಯ ಇಂನಿಯರೊಬ್ಬರನ್ನು ಕಾಟಾಚಾರಕ್ಕೆ ಕಳುಹಿಸಿದ್ದರು. ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ ತೋರಿಸಿದ ಇಂಜಿನಿಯರ್ ಆನಂದ್ ಅವರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಇವರ ವಿರುದ್ಧ ಕ್ರಮ ವಹಿಸುವಂತೆ ಮೇಲಾಧಿಕಾರಿಗಳಿಗೆ ಸೂಚನೆ ನೀಡಿದರು.

ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಸುಷ್ಮ, ಪುರಸಭಾ ಮುಖ್ಯಾಧಿಕಾರಿ ನಟರಾಜು, ಎಇ ಬಸವೇಗೌಡ, ನೀರಾವರಿ ಇಲಾಖೆ ಎಇಇ ಚಂದ್ರೇಗೌಡ, ಒಳಚರಂಡಿ ಇಲಾಖೆ ಎಇಇ ನದಾಫ್ ಸೇರಿದಂತೆ ಹಲವಾರು ಅಧಿಕಾರಿಗಳು ಹಾಜರಿದ್ದರು.

Share this article