ಉಕ ಜಿಲ್ಲೆ ಸಾಹಿತ್ಯಾಸಕ್ತರ ಪ್ರಯೋಗ ಶಾಲೆಯಂತಿದೆ

KannadaprabhaNewsNetwork | Published : Feb 26, 2025 1:03 AM

ಸಾರಾಂಶ

ಉಕ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗದೇ ಇರುವುದು ಪಾಪಪ್ರಜ್ಞೆ ಇಲ್ಲದ ವ್ಯವಸ್ಥೆಗೆ ರೂಪಕದಂತಿದೆ

ಅಂಕೋಲಾ: ಉಕ ಜಿಲ್ಲೆಯ ಸಾಹಿತ್ಯದ ಪ್ರಪಂಚವು ರಾಜ್ಯದ ಜನತೆಯ ಪ್ರಯೋಗ ಶಾಲೆಯಂತಿದೆ. ಆದರೆ ಇಂತಹ ವಿಶಿಷ್ಠ ಸಾರಸ್ವತ ಚರಿತ್ರೆ ಹೊಂದಿರುವ ಸಾಹಿತ್ಯ ಯುವ ಪೀಳಿಗೆ ಅರಿಯದೇ ಇರುವದು ದುರದೃಷ್ಠಕರ ಸಂಗತಿಯಾಗಿದೆ ಎಂದು ಹಿರಿಯ ಸಾಹಿತಿ ಪ್ರತಿಭಾ ನಂದಕುಮಾರ್ ಹೇಳಿದರು.

ಅವರು ಮಂಗಳವಾರ ಇಲ್ಲಿಯ ನಾಡವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ 11 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಉಕ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗದೇ ಇರುವುದು ಪಾಪಪ್ರಜ್ಞೆ ಇಲ್ಲದ ವ್ಯವಸ್ಥೆಗೆ ರೂಪಕದಂತಿದೆ ಎಂದು ವಿಷಾದಿಸಿದರು.

ಸಮ್ಮೇಳಾಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಜಿ.ಯು.ನಾಯಕ ಮಾತನಾಡಿ, ಸಾಹಿತ್ಯ ಜನಜೀವನದ ಕೈಗನ್ನಡಿಯಾಗಿದೆ. ಎಳೆಯರಲ್ಲಿ ಓದುವ ಚಟ ಬೆಳೆಸುವ ಕಾರ್ಯ ವಾಗಬೇಕಾಗಿದೆ. ಎಳೆಯ ಮನಸ್ಸಿನಲ್ಲಿ ಬಿತ್ತಿದ ಸಾಹಿತ್ಯವು ಭವಿಷ್ಯದ ಸಾಹಿತ್ಯ ಪ್ರಪಂಚಕ್ಕೆ ಬೆಳಕಾಗಿ ಜಗತ್ತನ್ನೆ ಪ್ರಜ್ವಲಿಸುವಂತೆ ಮಾಡಬಲ್ಲದು ಎಂದರು.

ಗ್ರಾಪಂ ಅಧ್ಯಕ್ಷ -ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಪ್ರದೀಪ ನಾಯಕ ವಾಸರೆ, ಹಿರಿಯ ಸಾಹಿತಿ ಶಾಂತಾರಾಮ ನಾಯಕ. ಹಿಚ್ಕಡ, ರಾಮಕೃಷ್ಣ ಗುಂದಿ, ವಿಠ್ಠಲ ಗಾಂವಕರ, ನಾಗೇಂದ್ರ ನಾಯಕ ತೊರ್ಕೆ, ಹೊನ್ನಮ್ಮ ನಾಯಕ, ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಆನೆಹೊಸೂರ, ಸರ್ಕಾರಿ ಪಪೂ ಉಪನ್ಯಾಸಕರ ಸಂಘದ ಅಧ್ಯಕ್ಷ ಮಹೇಶ ನಾಯಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಖ್ಯಾತ್ ಸಹಕಾರಿ ಧುರೀಣ ಜಾರ್ಜ ಫರ್ನಾಂಡಿಸ್ ಸಮ್ಮೇಳನ ದ್ವಾರ ಉದ್ಘಾಟಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮು ಅರ್ಗೇಕರ ಪುಸ್ತಕ ಮಳಿಗೆ ಉದ್ಘಾಟಿಸಿದರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾಗೇಶದೇವ ಅಂಕೋಲೆಕರ ಧ್ವಜ ಹಸ್ತಾಂತರ ಮಾಡಿದರು.

ಕಸಾಪದ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಆಶಯ ನುಡಿಗಳಾನ್ನಾಡಿದರು. ಕಸಾಪದ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಸ್ವಾಗತಿಸಿದರು. ನ್ಯಾಯವಾದಿ ನಾಗಾನಂದ ಬಂಟ ಹಾಗೂ ದೀಪ್ತಿ ನಾಯಕ ಪರಿಚಯಿಸಿದರು. ಕೆಎಲ್ಇ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತ ಪಡಿಸಿದರು. ಶಿಕ್ಷಕ ರಾಜೇಶ ನಾಯಕ, ಸೂರ್ವೆ ನಿರೂಪಿಸಿದರು. ಕಾರ್ಯದರ್ಶಿ ಜಗದೀಶ ನಾಯಕ ವಂದಿಸಿದರು.

ಇದೇ ಸಂದರ್ಭದಲ್ಲಿ ಜೆ. ಜಯಲಕ್ಷ್ಮಿಜಾನಪದ-ಸುಜ್ಞಾನ ಪುಸ್ತಕವನ್ನು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಬಿಡುಗಡೆಗೊಳಿಸಿದರು.

ಗೋವಾದ ಕ್ಯಾಸಿನೋಗೆ ಮಜಾ ಉಡಾಯಿಸಲು ಹೋಗುವ ಕರ್ನಾಟಕದ ಜನತೆ, ಇದೆ ಕರ್ನಾಟಕದಲ್ಲಿರುವ ಶ್ರೀಮಂತ ಅಪೂರ್ವ ಪರಂಪರೆ-ಸಂಸ್ಕ್ರತಿ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಆಸಕ್ತಿ ತೋರದಿರವದು ಖೇಧಕರ ವಿದ್ಯಾಮಾನಕ್ಕೆ ಸಾಕ್ಷಿಯಾಗಿದೆ ಎಂದು ಹಿರಿಯ ಸಾಹಿತಿ ಪ್ರತಿಭಾ ನಂದಕುಮಾರ ಹೇಳಿದ್ದಾರೆ.

Share this article