ಯುಕೆಪಿಗೆ ಸಿಗದ ಉತ್ತರ, ಪ್ರವಾಸೋದ್ಯಮಕ್ಕಿಲ್ಲ ಅನುದಾನ!

KannadaprabhaNewsNetwork |  
Published : Mar 07, 2026, 01:15 AM IST
ಆಲಮಟ್ಟಿ ಡ್ಯಾಂ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಬಾಗಲಕೋಟೆ ಜಿಲ್ಲೆಯ ಮಟ್ಟಿಗೆ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದೆ ವಿನಃ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಉತ್ತರ ಸಿಗುವ ಯಾವ ಲಕ್ಷಣಗಳು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಎಲ್ಲ ಭರವಸೆಗಳು ಸಹ ಭರವಸೆಗಳಾಗಿ ಉಳಿಯುವ ರೀತಿಯಲ್ಲಿ ಕಂಡು ಬರುತ್ತಿದೆ.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಬಾಗಲಕೋಟೆ ಜಿಲ್ಲೆಯ ಮಟ್ಟಿಗೆ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಿದೆ ವಿನಃ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಉತ್ತರ ಸಿಗುವ ಯಾವ ಲಕ್ಷಣಗಳು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಎಲ್ಲ ಭರವಸೆಗಳು ಸಹ ಭರವಸೆಗಳಾಗಿ ಉಳಿಯುವ ರೀತಿಯಲ್ಲಿ ಕಂಡು ಬರುತ್ತಿದೆ.

ಬಜೆಟ್‌ನಲ್ಲಿ ಬಾಗಲಕೋಟೆ ಜಿಲ್ಲೆಗೆ ಸಿಕ್ಕಿದ್ದೇನು?: ಮಹತ್ವಾಕಾಂಕ್ಷೆಯ ಕೃಷ್ಣಾ ಮೇಲ್ದಂಡೆ ಯೋಜನೆಯ ಸ್ಟೇಜ್-3ರ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟೆಯನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ಕಾಮಗಾರಿಯನ್ನು ಮುಳುಗಡೆಯಾಗುವ ಜಮೀನುಗಳ ಹಾಗೂ ನೀರಾವರಿ ಕಾಲುವೆ ಜಾಲಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರು ಮತ್ತು ಸಂತ್ರಸ್ತರ ದೀರ್ಘಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಪರಿಷ್ಕೃತ ಒಪ್ಪಂದದ ದರಗಳನ್ನು ಅನುಮೋದಿಸಿದೆ.

ಮುಳುಗಡೆಗೊಳ್ಳುವ ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ ₹30 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹40 ಲಕ್ಷ ನಿಗದಿಪಡಿಸಿರುವ ಸರ್ಕಾರ ಒಪ್ಪಂದದ ತೀರ್ಪುಗಳ ಮುಖಾಂತರ ಜಮೀನನ್ನು ಸ್ವಾಧೀನಪಡಿಸಿರುವ ಪ್ರಕ್ರಿಯೆಯನ್ನು ಪ್ರಸಕ್ತ ವರ್ಷದಲ್ಲಿ ಆರಂಭಿಸುವ ಭರವಸೆಯನ್ನು ಬಜೆಟ್‌ನಲ್ಲಿ ನೀಡಿದೆ.

ಮೀನು ಮಾರಾಟ ಮಾಡಲು ಬಾಗಲಕೋಟೆ ಜಿಲ್ಲೆಯಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಸದ್ಯ ಇರುವ ಕಾರ್ಮಿಕ ಇಲಾಖೆ ವಿಮಾ ಚಿಕಿತ್ಸಾಲಯ (ಇಎಸ್ಐ)ವನ್ನು ಉನ್ನತೀಕರಿಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಗುಳೇದಗುಡ್ಡದ ತಾಲೂಕು ಕ್ರೀಡಾಂಗಣದ ನಿರ್ಮಾಣಕ್ಕೆ ₹2 ಕೋಟಿ ಹಣ ನೀಡಲು ಬಜೆಟ್‌ನಲ್ಲಿ ಘೋಷಿಸಲಾಗಿದೆ.ಮೆಡಿಕಲ್ ಕಾಲೇಜು ಕನಸು ಶೀಘ್ರ ನನಸು?: ಬಾಗಲಕೋಟೆ ಮೆಡಿಕಲ್ ಕಾಲೇಜಿಗೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಅಡಿಯಲ್ಲಿ ಅಥವಾ ಘಟಕ ಅಂದರೆ ವಿಶ್ವವಿದ್ಯಾಲಯದ ಡಿಪಾಸಿಟ್ ನಿಧಿಯಲ್ಲಿ ಅಂದಾಜು ಪ್ರಸಕ್ತ ಬಜೆಟ್‌ನಲ್ಲಿ ₹200 ಇಂದ ₹300 ಕೋಟಿ ಕಾಯ್ದಿರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಸದಾಕಾಲ ಅತಿವೃಷ್ಟಿ, ಅನಾವೃಷ್ಟಿ, ಮುಳುಗಡೆಯ ಕಾರಣದಿಂದ ಎಲ್ಲವನ್ನು ಕಳೆದುಕೊಂಡಿರುವ ಜಿಲ್ಲೆಯ ಸಂತ್ರಸ್ತರಿಗೆ ಶಾಶ್ವತವಾದ ಉದ್ಯೋಗಕ್ಕೆ ಪೂರಕವಾದ ಕೈಗಾರಿಕೆಗಳ ಸ್ಥಾಪನೆಗಳಂತಹ ಯಾವ ಪ್ರಸ್ತಾಪಗಳೇ ಇಲ್ಲದಿರುವುದು ಸಹಜವಾಗಿ ಜಿಲ್ಲೆಯ ಜನತೆಯಲ್ಲಿ ಅಸಮಾಧಾನ ಮೂಡಿಸಿದೆ.

ಯುಕೆಪಿ-3ಗೆ ಸಿಗದ ಸ್ಪಷ್ಟ ಭರವಸೆ: ಪುನರ್ವಸತಿ ಮತ್ತು ಭೂಸ್ವಾಧೀನ, ಪುನರ್‌ ನಿರ್ಮಾಣ ಕಾರ್ಯ ಬಹುದೊಡ್ಡ ಆರ್ಥಿಕತೆ ವಿಷಯವಾಗಿದ್ದು, ಬಜೆಟ್‌ನಲ್ಲಿ ಕೇವಲ ರೈತರಿಗೆ ಪರಿಹಾರ ಧನ ವಿತರಣೆ ಮತ್ತು 2.1 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಪ್ರಸ್ತಾಪವಿದೆ. ಆದರೆ ಯೋಜನೆಯ ಆರ್ಥಿಕ ಲಭ್ಯತೆ ಬಗ್ಗೆ ಹಾಗೂ ಪರಿಹಾರ ಮತ್ತು ಪುನರ್ವಸತಿಯ ಖರ್ಚು ವೆಚ್ಚಗಳ ಅಂದಾಜು ಸರ್ಕಾರದ ಮುಂದೆ ಪರಿಹರಿಸುವ ಸಾಧ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಇದು ಸರ್ಕಾರದ ಮಾತಿನಂತೆ ಅನುಷ್ಠಾನಗೊಳಿಸುವುದು ಸಾಧ್ಯವೆ ಎಂಬುದು ಸಂತ್ರಸ್ತರ ಬಹುದೊಡ್ಡ ಪ್ರಶ್ನೆಯಾಗಿದೆ.

ಸಿಮೆಂಟ್, ಸಕ್ಕರೆ, ತೋಟಗಾರಿಕೆ ಬೆಳೆಗಳ ಸಮೃದ್ಧ ಜಿಲ್ಲೆಯಾಗಿರುವ ಬಾಗಲಕೋಟೆ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಔದ್ಯೋಗಿಕವಾಗಿ ವಿಸ್ತಾರಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದರೆ ನಿಶ್ಚಿತವಾಗಿಯೂ ಅಭಿವೃದ್ಧಿಗೆ ಪೂರಕವಾಗಿರುತ್ತಿತ್ತು. ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವೇ ಆಗಿಲ್ಲ. ಹೀಗಾಗಿ ಜಿಲ್ಲೆಯ ಮಟ್ಟಿಗೆ ಬಜೆಟ್ ನಿರಾಶದಾಯಕವೇ ಎಂದರೆ ತಪ್ಪಾಗಲಾರದು.

ನಾಲ್ಕು ವರ್ಷದ ಹಿಂದೆ ಬಜೆಟ್‌ನಲ್ಲಿ ಘೋಷಣೆಯಾದ ಗುಳೇದಗುಡ್ಡದಲ್ಲಿ ಆರಂಭಿಸಬೇಕಿದ್ದ ಜವಳಿ ಪಾರ್ಕ್‌ಗೆ ಇನ್ನೂ ಜಮೀನನ್ನೇ ನೀಡಿಲ್ಲ. ಕಳೆದ ವರ್ಷ ಗುಳೇದಗುಡ್ಡ ಹಾಗೂ ಇಳಕಲ್ಲ ನಗರದಲ್ಲಿ ಸೀರೆಯ ಮೈಕ್ರೋ ಕ್ಲಸ್ಟರ್‌ನ್ನು ಅಭಿವೃದ್ಧಿಪಡಿಸುವ ಮಾತನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು, ಆದರೆ ಸಾವಿರಾರು ನೇಕಾರರಿಗೆ ಉದ್ಯೋಗ ನೀಡಬೇಕಿದ್ದ ಜವಳಿ ಪಾರ್ಕ್‌ ನಿರ್ಮಾಣವೇ ಇನ್ನೂ ಕುಂಟುತ್ತಾ ಸಾಗಿದೆ ಹೀಗಿರುವಾಗ ಜವಳಿ ಕ್ಷೇತ್ರದ ಪುನಶ್ಚೇತನವನ್ನು ಈ ಸರ್ಕಾರದಿಂದ ಹೇಗೆ ನಿರೀಕ್ಷಿಸಲು ಸಾಧ್ಯ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಜಿಲ್ಲೆಯ ಪ್ರವಾಸೋದ್ಯಮಕ್ಕೆಶೂನ್ಯ ಕೊಡುಗೆ: ಐತಿಹಾಸಿಕ ಪರಂಪರೆಯ ತಾಣಗಳಾಗಿರುವ ಐಹೊಳೆ, ಬಾದಾಮಿ, ಪಟ್ಟದಕಲ್ಲಿನ ಅಭಿವೃದ್ಧಿ ವಿಷಯ ಬಂದಾಗಲೆಲ್ಲ ದೊಡ್ಡದಾಗಿ ಮಾತನಾಡುವ ಜಿಲ್ಲೆಯ ಪ್ರತಿನಿಧಿಗಳು ಪ್ರವಾಸೋದ್ಯಮ ಕ್ಷೇತ್ರ ಬಲಪಡಿಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದ ಅಸಹಾಯಕತೆಯಲ್ಲಿದ್ದಾರೆ ಎಂಬುದು ಮತ್ತೊಮ್ಮೆ ಈ ಬಜೆಟ್ ಮೂಲಕ ಸಾಬೀತಾಗಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಈ ಬಜೆಟ್ ಶೂನ್ಯ ಕೊಡುಗೆ ನೀಡಿದೆ ಎನ್ನಬಹುದು.

ರಾಜ್ಯ ಸರ್ಕಾರ ಮಂಡಿಸಿರುವ ಇಂದಿನ ಬಜೆಟ್ ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ಪೂರಕವಾಗದೆ ಇರುವುದು ಸಹಜವಾಗಿ ಜಿಲ್ಲೆಯ ಜನರಲ್ಲಿ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಅದರಲೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ಮೂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎತ್ತಿನ ಬಂಡಿಗೆ ಬೈಕ್‌ ಡಿಕ್ಕಿ; ಸವಾರ ಸಾವು
ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆಬೆಳಗಾವಿ ಅಜ್ಜಿ ಬ್ರಾಂಡ್‌ ಅಂಬಾಸಿಡರ್‌