ಉಳ್ಳಾಲ: ನೇತ್ರಾವತಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಪಾವೂರು ಗ್ರಾಮದ ಕಡವಿನಬಳಿಯ ಹರೇಕಳ, ಪರಾರಿ ದೋಟ ಭಾಗದಲ್ಲಿ ಮುಳುಗಡೆಯಾದ 15 ಮನೆಮಂದಿಯನ್ನು ಎನ್ ಡಿಆರ್‌ಎಫ್, ಅಗ್ನಿ ಶಾಮಕ ದಳ ನೇತೃತ್ವದಲ್ಲಿ ಸ್ಥಳಾಂತರಿಸಲಾಗಿದೆ.
ಕಡೆಂಜದೋಟ, ಬೈತಾರು, ಉಳಿದೊಟ್ಟು ಭಾಗದಲ್ಲಿ ನದಿ ತೀರದ ಪ್ರದೇಶದಲ್ಲಿ ನೀರು ಏರಿಕೆಯಾಗುತ್ತಲೇ ಇದೆ. ರಕ್ಷಣಾ ತಂಡಗಳು ಮನೆಯಲ್ಲಿದ್ದ 30 ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿದರು.ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಹರೇಕಳ ಪಾವೂರು ಗ್ರಾಮಗಳ ನದಿ ತಟದ ಹಲವು ಮನೆಗಳು ಅಪಾಯದಂಚಿನಲ್ಲಿವೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. ಪಾವೂರು ಗ್ರಾಮದ ಅಜೆರುಳಿಯ ಪ್ರದೇಶದಲ್ಲಿ ಐದು ಮನೆಗಳು ಹಾಗೂ ದೋಟ ಎಂಬಲ್ಲಿ ಎಂಟು ಮನೆಗಳು ನದಿ ನೀರಿನ ಮಟ್ಟ ಏರಿಕೆಯಾಗಿರುವ ಪರಿಣಾಮ ಅಪಾಯದಂಚಿನಲ್ಲಿವೆ. ರಸ್ತೆ ಸಂಚಾರ ಸಂಪೂರ್ಣ ಸ್ಘಗಿತವಾಗಿದೆ. ಮಂಗಳೂರು ಮಳೆಯು ಮತ್ತೆ ವಿಪರೀತಗೊಂಡ ಪರಿಣಾಮ ಸ್ಥಳದಲ್ಲಿ ಮುನ್ನೆಚರಿಕೆ ಕ್ರಮಗಳನ್ನು ತೆಗೆದುಕೊಳ್ಳಾಗಿದೆ.
ಸ್ಥಳಕ್ಕೆ ಉಳ್ಳಾಲ ತಹಶಿಲ್ದಾರ್ ಪುಟ್ಟರಾಜು ಹಾಗೂ ಸಹಾಯಕ ಅಯುಕ್ತ ಹರ್ಷವರ್ಧನ್ ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪಾವೂರು ಇನೋಳಿಯ ನಾಟ್ರಕೋಡಿ, ಕಿಲ್ಲೂರು, ಇನೋಳಿ ಕೆಳಗಿನ ಕೆರೆ ಎಂಬಲ್ಲಿಯು ಮಳೆ ನೀರು ಹೆಚ್ಚಾಗಿ ತಗ್ಗು ಪ್ರದೇಶಗಳಿಗೆ ನೀರು ತುಂಬಿ ನಲ್ವತ್ತಕ್ಕೂ ಹೆಚ್ಚು ಮನೆಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈಗಾಗಲೇ ಇಲ್ಲಿನ ಎಂಟು ಕುಟುಂಬಗಳು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.
ಹರೇಕಳ ಪ್ರದೇಶದ ಕಡವಿನ ಬಳಿ, ದೆಬ್ಬೆಲಿ ಎಂಬಲ್ಲಿಯೂ ನೀರಿನ ಮಟ್ಟ ಹೆಚ್ಚಾಗಿದೆ.ಕೊಣಾಜೆ ಗ್ರಾಮದ ಮಾಧವ ಎಂಬವರ ಮನೆಯ ಮಾಡು ಕುಸಿದು ಹಾನಿಯಾಗಿದೆ ಹಾಗೂ ಕೊಣಾಜೆ ಗ್ರಾಮದ ಅಸೈಗೋಳಿ ಹೇಮಾವತಿ ಎಂಬವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಕೈರಂಗಳದ ಡಿಜಿ ಕಟ್ಟೆ ಎಂಬಲ್ಲಿಯೂ ಒಂದು ಮನೆ ಅಪಾಯದಲ್ಲಿದೆ. ಇರಾ ಗ್ರಾಮದ ಅಬೂಬಕ್ಕರ್ ಎಂಬವರ ಮನೆ ಬಳಿ ಕಂಪೌಂಡ್ ಕುಸಿದು ಹಾನಿಯಾಗಿದೆ. ಕೊಣಾಜೆ ಗ್ರಾಮದ ಅಸೈಗೋಳಿ ಹೇಮಾವತಿ ಎಂಬವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ.