ಬಾಬು ಪಿಲಾರ್ ನಿಸ್ವಾರ್ಥ ಸೇವೆಗೆ ಉಳ್ಳಾಲ ಪ್ರೆಸ್ ಕ್ಲಬ್ ಗೌರವ

KannadaprabhaNewsNetwork | Published : Oct 23, 2024 12:41 AM

ಸಾರಾಂಶ

ಅಂತಿಮ ಸಂಸ್ಕಾರವಿರುವ ಮನೆಗಳಲ್ಲಿ ಮೃತದೇಹವನ್ನು ಸ್ನಾನ ಮಾಡುವುದರಿಂದ ಹಿಡಿದು ಅಲಂಕಾರಗೊಳಿಸಿ, ಚಟ್ಟ ಏರಿಸುವವರೆಗೆ ಸೇವೆ ನಡೆಸಲು ಆರಂಭಿಸಿದ್ದಾರೆ. ಹೀಗೆ ಎಲ್ಲಿ ಮರಣವಾದರೂ ಬಾಬಣ್ಣನನ್ನು ಕರೆಯುವವರು ಈಗಲೂ ಅನೇಕರಿದ್ದಾರೆ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಒಮ್ಮೆ ಹಣದ ಆಸೆಯಿಂದ ಹೆಣ ಸುಡುವವರಿಬ್ಬರ ನಡುವೆ ಗಲಾಟೆ ತಾರಕಕ್ಕೇರಿತ್ತು, ಉಳ್ಳಾಲ ಭಾಗದಲ್ಲಿ ಆರ್ಥಿಕವಾಗಿ ದುರ್ಬಲರಾದ ಹಿಂದುಗಳಿಗೆ ಅಂತಿಮ ಸಂಸ್ಕಾರ ನಡೆಸಲು ವಿಧಿಯೇ ಇಲ್ಲ ಅಂದಾಗ ಎಲ್ಲರಿಗೂ ಎದುರಾಗಿ ನಿಂತು ಧೈರ್ಯ ತೋರಿ ಉಚಿತ ಅಂತಿಮ ಸಂಸ್ಕಾರ ನಡೆಸಿದವರು ಬಾಬು ಪಿಲಾರ್. 2024ರ ಅ.20ಕ್ಕೆ ಅವರು ಅಂತಿಮ ಸಂಸ್ಕಾರ ಮಾಡಿದ್ದು 4,500 ಮೃತದೇಹಗಳು ಅನ್ನುವುದು ಅವರು ಬರೆದಿಟ್ಟ ಕ್ಯಾಲೆಂಡರಿನಲ್ಲಿ ದಾಖಲಾಗಿದೆ. ಸರಳ ವ್ಯಕ್ತಿತ್ವದ ವ್ಯಕ್ತಿ ಬಾಬು ಪಿಲಾರ್ ಅವರಿಗೆ ಉಳ್ಳಾಲ ಪ್ರೆಸ್‌ಕ್ಲಬ್ ವತಿಯಿಂದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಅಸೈಗೋಳಿ ಅಭಯಾಶ್ರಮದ ಸ್ಥಾಪಕಾಧ್ಯಕ್ಷ ಶ್ರೀನಾಥ್ ಹೆಗ್ಡೆ ಗೌರವಿಸಿ ಮಾತನಾಡಿದರು. ಬಾಬು ಪಿಲಾರ್ ಅವರು ತಮ್ಮ ಜೀವಿತಾವಧಿಯಲ್ಲಿ ದೊರೆತಂದಹ ಯೋಗವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್. ಕೊಣಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಉಪಾಧ್ಯಕ್ಷ ಆರೀಫ್ ಯು.ಆರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಆಸೀಫ್ ಬಬ್ಬುಕಟ್ಟೆ, ಅಶ್ವಿನ್ ಕುತ್ತಾರ್, ಪತ್ರಕರ್ತರುಗಳಾದ ರಜನಿಕಾಂತ್ ಬಬ್ಬುಕಟ್ಟೆ, ಗಂಗಾಧರ್ ಕೊಣಾಜೆ ಉಪಸ್ಥಿತರಿದ್ದರು.

ಉಪಾಧ್ಯಕ್ಷ ದಿನೇಶ್ ನಾಯಕ್ ತೊಕ್ಕೊಟ್ಟು ಸ್ವಾಗತಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಕುತ್ತಾರ್ ಅತಿಥಿ ವಿವರ ನೀಡಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವಜ್ರ ಗುಜರನ್ ವಂದಿಸಿದರು.ಬಾಬು ಪಿಲಾರ್‌ ಪರಿಚಯ: 1982ರಲ್ಲಿ ಉಳ್ಳಾಲಬೈಲ್‌ನಲ್ಲಿ ಹೆಣ ಸುಡುವ ವಿಚಾರಕ್ಕೆ ಸಂಬಂಧಿಸಿ ಅಂದಿನ ಕಾಲದಲ್ಲಿ 400 ರು. ಪಡೆಯಲೆಂದೇ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಚೆಂಬುಗುಡ್ಡೆಯಲ್ಲಿ ಕಟ್ಟಿಗೆಯನ್ನು ಇಟ್ಟು ಉಚಿತವಾಗಿ ಸೇವೆ ಮಾಡಿದವರು, ಬಾಬಣ್ಣ. ಇದರಿಂದಾಗಿ ಮೃತದೇಹ ಸುಡಲು ಅಸಾಧ್ಯವಾಗದ ಆರ್ಥಿಕವಾಗಿ ಹಿಂದುಳಿದ ಮನೆಯವರು ನಂತರ ಬಾಬಣ್ಣನನ್ನು ಹುಡುಕುತ್ತಲೇ ಅಂತಿಮ ಸಂಸ್ಕಾರ ನಡೆಸಲು ಆರಂಭಿಸಿದ್ದರು. ಕೊಣಾಜೆಯಿಂದ ಕೇರಳದ ಕುಂಬ್ಳೆವರೆಗೂ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗುತ್ತಿದ್ದ ಅವರು ಚೆಂಬುಗುಡ್ಡೆ ಹಿಂದೂ ರುದ್ರಭೂಮಿ ಅಭಿವೃದ್ಧಿ ಹೊಂದಿದ ನಂತರ ಕಟ್ಟಿಗೆಯನ್ನು ಇಡುವ ಕಾಯಕ ಬಿಟ್ಟು, ಅಂತಿಮ ಸಂಸ್ಕಾರವಿರುವ ಮನೆಗಳಲ್ಲಿ ಮೃತದೇಹವನ್ನು ಸ್ನಾನ ಮಾಡುವುದರಿಂದ ಹಿಡಿದು ಅಲಂಕಾರಗೊಳಿಸಿ, ಚಟ್ಟ ಏರಿಸುವವರೆಗೆ ಸೇವೆ ನಡೆಸಲು ಆರಂಭಿಸಿದ್ದಾರೆ. ಹೀಗೆ ಎಲ್ಲಿ ಮರಣವಾದರೂ ಬಾಬಣ್ಣನನ್ನು ಕರೆಯುವವರು ಈಗಲೂ ಅನೇಕರಿದ್ದಾರೆ. ಅಂತಿಮ ಸಂಸ್ಕಾರದ ಸೇವೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಬೀಡಿ ಸ್ಕಾಲರ್ ಶಿಪ್ ಉಳ್ಳಾಲ ಭಾಗದಲ್ಲಿ ಪರಿಚಯಿಸಿದ್ದೇ ಬಾಬಣ್ಣ ನೇತೃತ್ವದ ತಂಡ.

Share this article