ಕನ್ನಡಪ್ರಭ ವಾರ್ತೆ ಹುಕ್ಕೇರಿ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗನ್ನು ಹಗುರವಾಗಿ ಪರಿಗಣಿಸಬಾರದು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಎನಿಸಿದಾಗ ಗಟ್ಟಿ ದನಿ ಎತ್ತುತ್ತಿದ್ದ ದಿ.ಉಮೇಶ ಕತ್ತಿ ಅವರ ಹೋರಾಟ ವ್ಯರ್ಥವಾಗದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ ಹೇಳಿದರು.ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಬುಧವಾರ ಆಯೋಜಿಸಿದ ಉತ್ತರ ಕರ್ನಾಟಕದ ಕನಸುಗಾರ ಉಮೇಶ ಕತ್ತಿ ಅವರ ಜೀವನಾಧಾರಿತ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿ ಮತ್ತು ಅನುದಾನ ಬಿಡುಗಡೆಯಲ್ಲಿ ಅನ್ಯಾಯ ಕಂಡು ಬಂದಾಗ ಉಮೇಶ ಕತ್ತಿ ತಮ್ಮ ದಿಟ್ಟ ನಿಲುವುಗಳ ಮೂಲಕ ಸರ್ಕಾರದ ಕ್ರಮಗಳನ್ನು ವಿರೋಧಿಸುತ್ತಿದ್ದರು ಎಂದರು.ಹುಕ್ಕೇರಿ ಕ್ಷೇತ್ರದಲ್ಲಿ ಉಮೇಶ ಕತ್ತಿ ಅವರು ತಮ್ಮ ಅಗಾಧ ಆಡಳಿತ, ಅನುಭವದಿಂದ ಕೃಷಿ, ನೀರಾವರಿ, ಶಿಕ್ಷಣ, ಕೈಗಾರಿಕೆ, ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ, ದೀನ ದಲಿತರ ಏಳಿಗೆಗೆ ಅಪಾರ ಕೊಡುಗೆ ನೀಡಿರುವುದು ಅವಿಸ್ಮರಣೀಯ. ಹಾಗಾಗಿಯೇ ವಿವಿಧ ಪಕ್ಷಗಳಿಂದ ಸ್ಪರ್ಧಿಸಿ 8 ಬಾರಿ ಚುನಾಯಿತರಾಗಿದ್ದರು. ಇದು ಅವರ ಜನಪ್ರಿಯತೆಗೆ ಸಾಕ್ಷಿ. ಅವರ ಅಕಾಲಿಕ ನಿಧನ ಉತ್ತರ ಕರ್ನಾಟಕದ ಧೀಮಂತ ರಾಜಕೀಯ ಶಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಬೇಸರಿಸಿದರು.ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಇಂದಿನ ರಾಜಕಾರಣದಲ್ಲಿ ಸ್ವಾರ್ಥ ಹೆಚ್ಚಾಗಿದೆ. ಇದರಿಂದ ಮತದಾರರು ಹಣ, ಹೆಂಡಕ್ಕೆ ಬಲಿಯಾಗದೇ ಯೋಗ್ಯರಿಗೆ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವ ಯಶಸ್ಸಿಗೆ ನೇರ, ದಿಟ್ಟ ನಿಲುವು ಹೊಂದಿದ ಉಮೇಶ ಕತ್ತಿ ಅವರಂಥ ಪ್ರತಿನಿಧಿಗಳ ಅಗತ್ಯವಿದೆ. ಬೆಳಗಾವಿ ಜಿಲ್ಲೆಯಲ್ಲಿ ಎ.ಬಿ.ಪಾಟೀಲ ಮತ್ತು ಕತ್ತಿ ಕುಟುಂಬ ಒಂದುಗೂಡಬೇಕೆಂಬ ಜನರ ಆಶಯ ಈಗ ಈಡೇರಿದೆ ಎಂದರು.ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ಕತ್ತಿ ಕುಟುಂಬ ಕೈಗೊಳ್ಳುವ ನಿರ್ಧಾರ ಬೆಂಬಲಿಸಲು ಜನರು ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ದೆಹಲಿ ವಿಶೇಷ ಪ್ರತಿನಿಧಿಯೂ ಆದ ಎಂಎಲ್‌ಸಿ ಪ್ರಕಾಶ ಹುಕ್ಕೇರಿ ಅಧ್ಯಕ್ಷತೆ ವಹಿಸಿದ್ದರು.
ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಬೆಲ್ಲದ ಬಾಗೇವಾಡಿ ಶಿವಾನಂದ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಕ್ಯಾರಗುಡ್ ಅವುಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ನಿಖಿಲ್ ಕತ್ತಿ ಸ್ವಾಗತಿಸಿದರು. ಮಾಜಿ ಸಂಸದ ರಮೇಶ ಕತ್ತಿ, ಯುವ ಮುಖಂಡರಾದ ಪೃಥ್ವಿ ಕತ್ತಿ, ಪವನ ಕತ್ತಿ ನೇತೃತ್ವ ವಹಿಸಿದ್ದರು.ಶಾಸಕರಾದ ಅಭಯ ಪಾಟೀಲ, ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ, ಅಶೋಕ ಪಟ್ಟಣ, ವಿಠ್ಠಲ ಹಲಗೇಕರ, ಮಾಜಿ ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಮುಖಂಡರಾದ ಡಾ.ಮಹಾಂತೇಶ ಕಡಾಡಿ, ಮಹಾವೀರ ನಿಲಜಗಿ, ವಿನಯ ಪಾಟೀಲ, ಮಾರುತಿ ಅಷ್ಟಗಿ, ಬಸವರಾಜ ಹುಂದ್ರಿ ಮತ್ತಿತರರು ಉಪಸ್ಥಿತರಿದ್ದರು.ಪ್ರಧಾನ ಸಂಪಾದಕ ಡಾ.ವಿ.ಎಸ್.ಮಾಳಿ ನೇತೃತ್ವದ ಆರ್.ಟಿ.ಶಿರಾಳಕರ, ಪಿ.ಜಿ.ಕೊಣ್ಣೂರ, ಎಸ್.ಎಸ್.ಹಿರೇಮಠ ಅವರನ್ನೊಳಗೊಂಡ ತಂಡ ಈ ಪುಸ್ತಕ ರೂಪಿಸಿದೆ. ಸುನೀತಾ ಪಾಟೀಲ ನಿರೂಪಿಸಿದರು.ವಿರೋಧಿಗಳ ಸೆದೆಬಡಿಯುವ ಶಪಥಸಮಾರಂಭದ ನೇತೃತ್ವ ವಹಿಸಿದ್ದ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಹುಕ್ಕೇರಿ ಕ್ಷೇತ್ರದ ರಾಜಕೀಯ ಮತ್ತು ಸಹಕಾರ ಕ್ಷೇತ್ರದಲ್ಲಿ ಕೈಯಾಡಿಸುತ್ತಿರುವ ಕಾಣದ ಕೈಗಳನ್ನು ಸುಂಟರಗಾಳಿಯಾಗಿ ಸೆದೆಬಡಿಯುವ ಶಪಥ ಮಾಡಿದರು. ಸಹೋದರ ದಿ.ಉಮೇಶ ಕತ್ತಿ ಅವರ ಒಡನಾಟವನ್ನು ನೆನೆಯುತ್ತಿದ್ದಂತೆ ಕೆಲಕಾಲ ಭಾವುಕರಾದ ರಮೇಶ ಕತ್ತಿ ಕಣ್ಣಾಲೀಗಳಲ್ಲಿ ನೀರು ಜಿನುಗಿತು. ಮತ್ತೇ ಚೇತರಿಸಿಕೊಂಡು ಮಾತು ಮುಂದುವರೆಸಿದ ರಮೇಶ ಕತ್ತಿ, ವಿರೋಧಿಗಳಿಗೆ ತಕ್ಕ ಪಾಠ ಕಲಿಸುವವರೆಗೂ ವಿರಮಿಸುವುದಿಲ್ಲ ಎಂದರು.ಹೊಸ ಮನ್ವಂತರ, ಚುನಾವಣೆಗೆ ದಿಕ್ಸೂಚಿಪ್ರಾದೇಶಿಕ ಅಸಮಾನತೆ ವಿರುದ್ಧ ಆಗಾಗ ಗಟ್ಟಿ ಧ್ವನಿ ಎತ್ತುತ್ತಿದ್ದ ಪ್ರತ್ಯೇಕ ರಾಜ್ಯದ ಪ್ರತಿಪಾದಕ ದಿ.ಉಮೇಶ ಕತ್ತಿ ಅವರ ಜೀವನಾಧಾರಿತ ಉತ್ತರ ಕರ್ನಾಟಕದ ಕನಸುಗಾರ ಉಮೇಶ ಕತ್ತಿ ಗ್ರಂಥ ಬಿಡುಗಡೆ ಸಮಾರಂಭ ಹುಕ್ಕೇರಿ ಇತಿಹಾಸದಲ್ಲಿಯೇ ಹೊಸ ಚರಿತ್ರೆ ಸೃಷ್ಟಿಸಿತು. ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಪೀಠಾಧಿಪತಿಗಳು, ಮುಖಂಡರು, ಈ ದಾಖಲಾರ್ಹ ಸಮಾರಂಭದಲ್ಲಿ ಭಾಗಿಯಾಗಿ ಉಮೇಶ ಕತ್ತಿ ಅವರ ಅಭಿವೃದ್ಧಿ ಕೆಲಸ ಮತ್ತು ಸಾಧನೆಗಳನ್ನು ಬಣ್ಣಿಸಿದರು. ತನ್ಮೂಲಕ ಹುಕ್ಕೇರಿ ತಾಲೂಕು ಹೊಸ ಮನ್ವಂತರಕ್ಕೆ ಸಾಕ್ಷಿಯಾಯಿತು.ಭಕ್ತಿ ಇಲ್ಲದ ಶಕ್ತಿ ತೀರಾ ಅಪಾಯಕಾರಿ. ಒಳಗೊಂದು-ಹೊರಗೊಂದು ರಾಜಕಾರಣ ಹೆಚ್ಚಾಗಿದೆ. ಪೋಸ್ಟರ್ ಜನನಾಯಕರಿಂದ ಗೋಕಾಕನಲ್ಲಿ ಕೆಟ್ಟ ವ್ಯವಸ್ಥೆ ಜಾರಿಯಲ್ಲಿದ್ದು ಕೇಂದ್ರಾಡಳಿತ ಪ್ರದೇಶ ಎಂಬ ವಾತಾವರಣವಿದೆ. ರಾಜಕೀಯದಲ್ಲಿ ಏರಿಳಿತ ಸಹಜ. ರೈತಪರ ನಿಲವು ಹೊಂದಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಉಮೇಶ ಕತ್ತಿ ಅವರಿಗೆ ಸಲ್ಲುತ್ತದೆ.
- ಈರಣ್ಣಾ ಕಡಾಡಿ, ರಾಜ್ಯಸಭೆ ಸದಸ್ಯ.