ಕನ್ನಡಪ್ರಭ ವಾರ್ತೆ ಕಲಬುರಗಿ
ಸಾಲದ ಭಾದೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಫರತಾಬಾದ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕವಲಗಾ (ಬಿ) ಗ್ರಾಮದಲ್ಲಿ ನಡೆದಿದೆ.ಸಾವನ್ನಪ್ಪಿದ ರೈತನನ್ನು ಹಣಮಂತ ತಂದೆ ಬಸವರಾಜ ಮೊಸಂಡಿ (35) ಎಂದು ಗುರುತಿಸಲಾಗಿದೆ. ತನ್ನ ಹೊಲದಲ್ಲಿರುವ ಬಾವಿಯಲ್ಲಿ ನೇಣು ಹಾಕಿಕೊಂಡು ರೈತ ಸಾವನ್ನಪ್ಪಿದ್ದಾನೆ. ಒಕ್ಕಲುತನವನ್ನೇ ನಂಬಿ ಈತ ಬದುಕು ಕಟ್ಟಿಕೊಂಡಿದ್ದ, ಬೇಸಾಯಕ್ಕಾಗಿ ಹಲವು ವೆಚ್ಚಗಳಿಗೆ ಈತ ಬ್ಯಾಂಕ್ ಹಾಗೂ ಖಾಸಗಿಯಾಗಿ ಬಹುಲಕ್ಷ ಸಾಲ ಮಾಡಿದ್ದ.
ತನಗಿದ್ದ 3 ಎಕರೆ ಜಮೀನಲ್ಲೇ ಬೇಸಾಯ ಮಾಡಿಕೊಂಡಿದ್ದ ಹಣಮಂತ ಸಾಲದ ಹೊರೆ ಹೆಚ್ಚಾಗಿ ಸಾವನ್ನಪ್ಪಿದ್ದಾನೆ ಎಂದು ಕುಟುಂಬದವರು ಹೇಳಿದ್ದಾರೆ. ಪತ್ನಿ ರಾಧಿಕಾ, ಇಬ್ಬರು ಮಕ್ಕಳನ್ನು ಹಣಮಂತ ಅಗಲಿದ್ದಾನೆ.ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 2 ಲಕ್ಷ, ಕೃಷಿ ಗಾಗಿ ಖಾಸಗಿ 3 ಲಕ್ಷ 50 ಸಾವಿರ ರು. ಸಾಲ ಮಾಡಿದ್ದ.
ಸದ್ಯ ಹೊಲದಲ್ಲಿ ಹತ್ತಿ ಬೆಳೆ ಮತ್ತು ತೊಗರಿ ಫಸಲಿತ್ತು. ಪರತಾಬಾದ್ ಬಾಂಕ್ ಆಫ್ ಬರೋಡಾ ಬ್ಯಾಂಕಿನಲ್ಲಿ ಸಹ 7. 50 ಲಕ್ಷ ರು ಸಾಲ ಇವನದಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.ಅತಿಯಾದ ಮಳೆಯಿಂದ ನೀರು ಹತ್ತಿ ಹಾಳಾಗಿತ್ತು, ತೊಗರಿಯೂ ನೀರಲ್ಲಿ ಮುಳುಗಿತ್ತು. ಇದನ್ನು ಕಂಡು ಹೌಹಾರಿದ್ದ ರೈತ ಹಣಮಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಗೊತ್ತಾಗಿದೆ.
.....ಬಾಕ್ಸ್.....ರೈತನ ಸಾವಿಗೆ ಕಂಬನಿ: ಇಂದು ರಸ್ತೆತಡೆ ಹೋರಾಟ
ರೈತನ ಆತ್ಮಹತ್ಯೆ ಘಟನೆಗೆ ಕಂಬನಿ ಮಿಡಿದಿರುವ ಪ್ರಾಂತ ರೈತ ಸಂಘದ ಶರಣಬಸಪ್ಪ ಮಮಶೆಟ್ಟಿ, ತಕ್ಷಣ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಆಗ್ರಹಿಸಿದ್ದಾರೆ. ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಗುರುವಾರ ಡಿಸಿ ಕಚೇರಿ ಮುಂದೆ ಹೋರಾಟ ನಡೆಸಲು ಸಜ್ಜಾಗಿದೆ ಎಂದು ಅಧ್ಯಕ್ಷ ಶರಣಬಸಪ್ಪ ಹೇಳಿದ್ದಾರೆ. ಪಟೇಲ್ ವೃತ್ತದಿಂದ ಡಿಸಿ ಕಚೇರಿವರೆಗೂ ಮೆರವಣಿಗೆ ಬಂದು ರಸ್ತೆತಡೆ ನಡೆಸಲಾಗುತ್ತದೆ. ಅತಿವೃಷ್ಟಿ ಮಳೆಯಿಂದ ಹಾನಿಯಾದ ತೊಗರಿ ನಾಡು, ತೊಗರಿ, ಹೆಸರು, ಉದ್ದು, ಸೋಯಾ ನೀರು ಪಾಲಾಗಿದೆ. ರೈತರು ಚಿಂತಾ ಜನಕರಾಗಿದ್ದಾರೆ. ಬೆಳೆ ನಷ್ಟ ಸಮೀಕ್ಷೆ ಮಾಡಿ, ಬೆಳೆ ಪರಿಹಾರ ಕೊಡಿ, ಬೆಳೆ ವಿಮೆ ಜಾರಿ ಮಾಡಿ, ತೊಗರಿ ನಾಡಿಗೆ ವಿಶೇಷ ಪ್ಯಾಕೇಜ್ ಕೊಡಿ, ತೊಗರಿ ನಾಡು ಅತಿವೃಷ್ಟಿ ಘೋಷಣೆ ಮಾಡಿ ಎಂದು ಆಗ್ರಹಿಸಲಾಗಿದೆ ಎಂದು ಶರಣಬಸಪ್ಪ ಮಮಶೆಟ್ಟಿ ಹೇಳಿದ್ದಾರೆ.----------------
ಫೋಟೊ: ಸಾಲಬಾಧೆಗೆ ಸಾವನ್ನಪ್ಪಿರುವ ಹಣಮಂತನ ಹತ್ತಿಹೊಲ ಮಲೆ ನೀರು ನಿಂತು ಫಸಲು ಹಾಳಾಗಿತ್ತು